ಮಂಗಳೂರು: ಈಗಾಗಲೇ ಚಾಲ್ತಿಯಲ್ಲಿರುವ ರಸ್ತೆಗಳಿಗೆ ಮರುನಾಮಕರಣ ಮಾಡಲು ಸಮಯ ಇರುವ ಜನಪ್ರತಿನಿಧಿಗಳಿಗೆ ಜಿಲ್ಲೆಯ ಅಸ್ಮಿತೆಯ ಭಗವಾಗಿದ್ದ ವಿಜಯಾ ಬ್ಯಾಂಕ್ ಸೇರಿದಂತೆ ಬ್ಯಾಂಕ್‌ಗಳ ವಿಲೀನದ ಬಗ್ಗೆ ಧ್ವನಿ ಎತ್ತಲು ಸಾಧ್ಯವಾಗದೇ ಇರುವುದು ದುರಂತ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಯೂನಿಯನ್ ಜಿಲ್ಲಾ ಮುಖೀಂಡ ವಿನ್ಸೆಂಟ್ ಡಿಸೋಜ ಅಸಾಮಾಧಾನ ವ್ಯಕ್ತಪಡಿಸಿದರು.
ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯ ದ.ಕ.ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮಂಗಳೂರಿನ ಮಿನಿವಿಧಾನ ಸೌಧದ ಎದುರು ನಡೆದ ಬೃಹತ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸಾರ್ವಜನಿಕ ವಲಯದ 29 ಬ್ಯಾಂಕ್‌ಗಳನ್ನು ಈಗಾಗಲೇ ವಿಲೀನ , ಖಾಸಗೀಕರಣ ನೆಪದಲ್ಲಿ 12ಕ್ಕೆ ಇಳಿಸಲಾಗಿದ್ದು, ಇದರಿಂದ ಗ್ರಾಮಾಂತರ ಪ್ರದೇಶದ ಜನರಿಗೆ ಬಹಳಷ್ಟು ತೊಂದರೆಯಾಗುತ್ತಿದೆ, ಈ ನಿಟ್ಟಿನಲ್ಲಿ ಬ್ಯಾಂಕ್ ಖಾಸಗೀಕರಣ,ವಿಲೀನೀಕರಣದ ಕುರಿತಾಗಿ ಧ್ವನಿ ಎತ್ತಬೇಕಾದ ಅನಿವಾರ್ಯತೆ ಇದೆ ಎಂದರು.
ಸಿಐಟಿಯ ಮುಖಂಡ ಸುನಿಲ್ ಕುಮಾರ್ ಬಜಾಲ್ ಮಾತನಾಡಿ , ಕನಿಷ್ಟ ಕೂಲಿಗಾಗಿ ಹಲವಾರು ಸಮಯದಿಂದ ಹೋರಾಟ ನಡೆಸಿದರೂ, ಇಂದಿಗೂ ಗುತ್ತಿಗೆ ಕಾರ್ಮಿಕರ ಪರಿಸ್ಥಿತಿ ಸುಧಾರಣೆ ಕಂಡಿಲ್ಲ, ಸಾರ್ವಜನಿಕ ಉದ್ದಿಮೆಗಳೂ ಕಾರ್ಪೋರೇಟ್ ಕಂಪೆನಿಗಳಿಗೆ ಸೇರುತ್ತಿವೆ, ಕೊರೋನಾ ಹೆಸರಿನಲ್ಲಿ ಲಾಕ್‌ಡೌನ್ ಹೇರಿ ಜನರನ್ನು ಮನೆಯಲ್ಲಿರಿಸಿ ಕೇಂದ್ರ ಸರಕಾರಕಾರ್ಮಿಕ, ರೈತ, ದಲಿತ ವಿರೋಧಿ ಕಾನೂನುಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.
ಇದೇ ಸಂದರ್ಭದಲ್ಲಿ ಎಐಟಿಯುಸಿನ ಸಡೀತಾರಾಮ ಬೇರಿಂಜ ಮಾತನಾಡಿ ಸರಕಾರದ ತಪ್ಪು ನೀತಿಗಳ ವಿರುದ್ಧ ಧ್ವನಿ ಎತ್ತಬೇಕು ಎಂದರು. ಪ್ರತಿಭಟನೆಯನ್ನುದ್ದೇಶಿಸಿ ವಿವಿದ ಕಾರ್ಮಿಕ ಹಾಗೂ ಜನಪರ ಸಂಘಟನೆಗಳ ಮುಖಂಡರು ಮಾತನಾಡಿದರು. ಪ್ರತಿಭಟನೆಯಲ್ಲಿ ನ್ಯಾಯವಾದಿ ದಿನಕರ ಶೆಟ್ಟಿ, ವಸಂತ ಆಚಾರ್, ಮುಹಮ್ಮದ್ ರಫೀಕ್, ಎಚ್.ವಿ.ರಾವ್, ರವಿಕಿರಣ ಪುಣಚ, ಮುನೀರ್ ಕಾಟಿಪಳ್ಳ , ವಾಸುದೇವ ಉಚ್ಚಿಲ್, ರಾಘವ , ಬಿ.ಎಂ.ಮಾಧವ, ಬಿ.ಎನ್.ದೇವಾಡಿಗ, ಚಿತ್ತರಂಜನ್ ಶೆಟ್ಟಿ, ಮನೋಹರ್ ಶೆಟ್ಟಿ, ಬಿ.ಕೆ.ಇಮ್ತಿಯಾಝ್, ಸಂತೋಷ್ ಕುಮಾರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.