ಉಡುಪಿ: ಜಿಲ್ಲೆಯ ಕಾರ್ಕಳದಲ್ಲಿ ಉದ್ಯಮಿಯೊಬ್ಬರು ವಿಷ ಸೇವಿಸಿ, ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಕಾರ್ಕಳ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ.
ಕಾರಿನೊಳಗೆ ಕುಳಿತುಕೊಂಡು ತಲೆಗೆ ಗುಂಡು ಹಾರಿಸಿಕೊಂಡು ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಮುಂಜಾನೆ ಕಾರ್ಕಳ ತಾಲೂಕಿನ ನಿಟ್ಟೆ ದೂಪದಕಟ್ಟೆಯಲ್ಲಿ ಈ ಘಟನೆ ಸಂಭವಿಸಿದೆ. ಮೂಲತಃ ಕಾರ್ಕಳದವರಾದ ಮಂಗಳೂರು ನಿವಾಸಿ ಉದ್ಯಮಿ ದಿಲೀಪ್ ಎನ್.ಆರ್ ಆತ್ಮಹತ್ಯೆಗೆ ಶರಣಾದ ಉದ್ಯಮಿ.
ಕಳೆದ ಕೆಲ ವರ್ಷಗಳಿಂದ ಮಂಗಳೂರಿನಲ್ಲಿ ವಾಸವಿದ್ದರು. ಕಳೆದ ರಾತ್ರಿ ಕಾರಿನಲ್ಲಿ ಕಾರ್ಕಳಕ್ಕೆ ಹೋಗುವುದಾಗಿ ಹೊರಟಿದ್ದರು. ನಿಟ್ಟೆ ಬಳಿಯ ದೂಪಕಟ್ಟೆಯ ನವೋದಯ ಪ್ರಾಪರ್ಟಿಸ್ ಮುಂಭಾಗ ಕಾರು ನಿಲ್ಲಿಸಿದ್ದಾರೆ. ವಿಷ ಸೇವಿಸಿ ತಮ್ಮ ಬಳಿಯಲ್ಲಿದ್ದ ಗನ್ ಮೂಲಕ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ದಿಲೀಪ್ ಕಾರ್ಕಳ ಪುರಸಭೆ ಸದಸ್ಯ ಸುಭೀತ್ ಎನ್.ಆರ್. ಅವರ ಸಹೋದರ. ಆರ್ಥಿಕ ಮುಗ್ಗಟ್ಟು ಮತ್ತು ಆರೋಗ್ಯ ಸಮಸ್ಯೆ ಆತ್ಮಹತ್ಯೆಗೆ ಕಾರಣ ಎಂದು ತಿಳಿದುಬಂದಿದೆ. ಕಾರ್ಕಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಕೇಸು ದಾಖಲಿಸಿದ್ದಾರೆ. ಮೃತದೇಹವನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ