ಮುಂಬೈ: ಇನ್‌ಸ್ಟಾಗ್ರಾಂನಲ್ಲಿ (Instagram) ಫಾಲೋವರ್ಸ್ ಕಡಿಮೆಯಾಗುತ್ತಿದ್ದಾರೆ ಎಂದು ಮಾನಸಿಕ ಖಿನ್ನತೆಗೊಳಗಾಗಿ ಕಂಟೆಂಟ್ ಕ್ರಿಯೇಟರ್ (Content Creator) ಮಿಶಾ ಅಗರ್ವಾಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಕುರಿತು ಮೃತಳ ಸಹೋದರಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ತನ್ನ 25ನೇ ಹುಟ್ಟುಹಬ್ಬ ಸಮೀಪಿಸುತ್ತಿರುವಾಗ ಇನ್‌ಸ್ಟಾಗ್ರಾಂನಲ್ಲಿ ಫಾಲೋವರ್ಸ್ ಕಡಿಮೆಯಾಗಿರುವುದು ಆಕೆಯನ್ನು ಮಾನಸಿಕ ಖಿನ್ನತೆ ಒಳಗಾಗುವಂತೆ ಮಾಡಿತ್ತು.
ಏಪ್ರಿಲ್ ತಿಂಗಳ ಆರಂಭದಿಂದಲೂ ಆಕೆ ತೀವ್ರ ಒತ್ತಡದಲ್ಲಿದ್ದಳು. 1 ಮಿಲಿಯನ್ ಫಾಲೋವರ್ಸ್ ಗಳಿಸಬೇಕೆನ್ನುವುದು ಆಕೆಯ ಗುರಿಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಫಾಲೋವರ್ಸ್ ಸಂಖ್ಯೆಯಲ್ಲಿ ಕುಸಿತ ಕಂಡಿದ್ದು, ಇದೇ ಬೇಸರದಿಂದ ಆತ್ಮಹತ್ಯೆ ಶರಣಾಗಿದ್ದಾಳೆ ಎಂದು ತಿಳಿಸಿದ್ದಾರೆ.
ಮಿಶಾ ಇನ್‌ಸ್ಟಾಗ್ರಾಂನಲ್ಲಿ ತನ್ನ ಭವಿಷ್ಯವನ್ನು ಕಂಡಿದ್ದಳು. ಜೊತೆಗೆ ಅದರಲ್ಲಿಯೇ ತನ್ನದೊಂದು ಪ್ರಪಂಚವನ್ನು ಕಟ್ಟಿಕೊಂಡಿದ್ದಳು. ಆಗಾಗ ನನ್ನನ್ನು ತಬ್ಬಿಕೊಂಡು ನನ್ನ ಫಾಲೋವರ್ಸ್ ಕಡಿಮೆಯಾದರೆ ನಾನೇನು ಮಾಡಲಿ? ಅಲ್ಲಿಗೆ ನನ್ನ ವೃತ್ತಿ ಜೀವನವೇ ಮುಗಿಯುತ್ತದೆ ಎಂದು ಅಳುತ್ತಿದ್ದಳು.
ಆದರೆ ನಾನು ಹಲವು ಬಾರಿ ಅವಳಿಗೆ, ಇದು ನಿನ್ನ ಇಡೀ ಪ್ರಪಂಚವಲ್ಲ, ಇದು ಕೇವಲ ಒಂದು ಹವ್ಯಾಸ ಮತ್ತು ಅದಿಲ್ಲದಿದ್ದರೆ ಜೀವನ ಮುಗಿಯುವುದಿಲ್ಲ ಎಂದು ಸಮಾಧಾನಪಡಿಸಲು ಪ್ರಯತ್ನಿಸಿದ್ದೆ. ಜೊತೆಗೆ ನೀನು LLB ಮುಗಿಸಿದ್ದೀಯಾ, ನಿನ್ನಲ್ಲಿರುವ ಪ್ರತಿಭೆ, ಪಿಸಿಎಸ್‌ಜೆ ಪರೀಕ್ಷೆಗೆ ತಯಾರಿ ಮಾಡು, ಒಂದು ದಿನ ನ್ಯಾಯಾಧೀಶಳಾಗುತ್ತೀಯಾ ಎಂದು ವೃತ್ತಿಜೀವನದ ಬಗ್ಗೆ ನೆನಪಿಸುತ್ತಿದ್ದೆ ಎಂದು ಹೇಳಿದರು.
ಇನ್‌ಸ್ಟಾಗ್ರಾಮ್‌ನ್ನು ಕೇವಲ ಮನರಂಜನೆಯಾಗಿ ನೋಡು, ನಿನ್ನನ್ನು ಬಲಿ ಪಡೆಯುವಂತೆ ಮಾಡಿಕೊಳ್ಳಬೇಡ ಎಂದು ಹೇಳಿದ್ದೆ. ಆದರೆ ಅವಳು ಕೇಳಲಿಲ್ಲ. ತುಂಬಾ ಒತ್ತಡಕ್ಕೊಳಗಾಗಿ ತನ್ನ ಪ್ರಾಣವನ್ನೇ ಕಳೆದುಕೊಂಡಳು ಎಂದು ತಿಳಿಸಿದ್ದಾರೆ.