ಬೆಳ್ತಂಗಡಿ: ಶಿರ್ಲಾಲು ಗ್ರಾಮದ ನಂದಗೋಕುಲ ಕಟ್ಟ ಮನೆ ಎಂಬಲ್ಲಿ ಅಪ್ರಾಪ್ತ ವಯಸ್ಸಿನ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ.
ಆರೋಪಿ ಶಿರ್ಲಾಲು ಗ್ರಾಮದ ನಿವಾಸಿ ಸನತ್ (28) ಎಂದು ತಿಳಿದುಬಂದಿದೆ. ಆರೋಪಿಯು ಯುವತಿಯ ತಂದೆಯ ಕಾರಿನಲ್ಲಿ ಚಾಲಕನಾಗಿ ದುಡಿಯುತ್ತಿದ್ದು, ಅಗಾಗ್ಗೆ ಮನೆಗೆ ಬಂದವನು ಸಲುಗೆಯಿಂದ ಇದ್ದ. ಕಳೆದ ವರ್ಷ ಮೇ 22ರಂದು ಅಪ್ರಾಪ್ತ ವಯಸ್ಸಿನ ಯುವತಿಯ ಜನ್ಮದಿನದ ಕಾರ್ಯಕ್ರಮಕ್ಕೆ ಬಂದವನು ರಾತ್ರಿ ಉಳಿದುಕೊಂಡಿದ್ದ. ಈ ವೇಳೆ ಯುವತಿಯೊಂದಿಗೆ ಒತ್ತಾಯಪೂರ್ವಕವಾಗಿ ಲೈಂಗಿಕ ಸಂಪರ್ಕ ನಡೆಸಿದ್ದ.
ಅಷ್ಟೇ ಅಲ್ಲದೆ ಪದೇ ಪದೇ ಈ ಕೃತ್ಯ ಎಸಗಿರುವ ಪರಿಣಾಮ ಗರ್ಭವತಿಯಾಗಿದ್ದಳು. ಯುವತಿ ಈ ಕುರಿತು ಇತ್ತೀಚೆಗೆ ತಾಯಿಯೊಂದಿಗೆ ಉಜಿರೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಹೋದಾಗ ವೈದ್ಯರು ಪರೀಕ್ಷಿಸಿ 3 ತಿಂಗಳ ಗರ್ಭವತಿ ಎಂದು ತಿಳಿಸಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಹೋಗುವಂತೆ ಸಲಹೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಆಕೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಯುವತಿ ನೀಡಿದ ದೂರಿನಂತೆ ಆರೋಪಿ ಸನತ್ ವಿರುದ್ಧ ವೇಣೂರು ಠಾಣೆಯಲ್ಲಿ ಪೋಕೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.