ಪುತ್ತೂರು: ಕೆಎಸ್ಸಾರ್ಟಿಸಿ ಬಸ್ಸೊಂದರ ಚಾಲಕನೋರ್ವ ತನ್ನ ನಿರ್ಲಕ್ಷತನದ ಚಾಲನೆಯಿಂದ ಬೈಕ್ ಸವಾರರಾದ ತಂದೆ ಮತ್ತು ಮಗ ಮೃತಪಟ್ಟ ಹೃದಯವಿದ್ರಾವಕ ಘಟನೆ ಪುತ್ತೂರಿನಲ್ಲಿ ಭಾನುವಾರ ನಡೆದಿದೆ.
ಬಂಟ್ವಾಳ ತಾಲೂಕಿನ ನರಿಕೊಂಬು ಬಳಿಯ ಬೋರುಗುಡ್ಡೆ ನಿವಾಸಿ ನರಿಕೊಂಬು ಗ್ರಾಪಂ ಸದಸ್ಯ ಹಾಗೂ ಸಮಾಜಸೇವಾ ಬ್ಯಾಂಕ್ ನಿರ್ದೇಶಕರಾದ ಅರುಣ್ ಕುಲಾಲ್ (45) ಹಾಗೂ ಅವರ ಪುತ್ರ ಧ್ಯಾನ್ (15) ರಸ್ತೆ ಅಪಘಾತಕ್ಕೆ ಬಲಿಯಾದ ದುರ್ದೈವಿಗಳು.
ಮಾಣಿ- ಮೈಸೂರು ರಾ.ಹೆದ್ದಾರಿಯ ಕಬಕ ಸಮೀಪದ ಕುವೆತ್ತಿಲ ಎಂಬಲ್ಲಿನ ತಿರುವುವೊಂದರಲ್ಲಿ ಕೆಎಸ್ಸಾರ್ಟಿಸಿ ಬಸ್ಸು ಮತ್ತು ಬೈಕ್ ನಡುವೆ ಡಿಕ್ಕಿ ಸಂಭಿಸಿತ್ತು. ಈ ಘಟನೆಯಲ್ಲಿ ಅರುಣ್ ಕುಲಾಲ್ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅವರ ಪುತ್ರ ಧ್ಯಾನ್ ಅವರು ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ.
ತನ್ನ ಸಂಬoಧಿಕರೊಬ್ಬರು ಮಗಳ ಮದುವೆ ಸುಳ್ಯದಲ್ಲಿ ನಡೆಯುತ್ತಿದ್ದು, ಈ ಶುಭಸಮಾರಂಭದಲ್ಲಿ ಪಾಲ್ಗೊಳ್ಳಲು ತಂದೆ ಮತ್ತು ಮಗ ಇಬ್ಬರೂ ಬೈಕ್ ನಲ್ಲಿ ಹೊರಟಿದ್ದರು.ಆದರೆ ಕುವೆತ್ತಿಲ ತಿರುವಿನಲ್ಲಿ ವಿರುದ್ಧ ದಿಕ್ಕಿನಲ್ಲಿ ಬಂದ ಸರ್ಕಾರಿ ಬಸ್ಸಿನ ಚಾಲಕನ ನಿರ್ಲಕ್ಷತೆ ಹಾಗೂ ಬೇಜವಾಬ್ದಾರಿಯ ವಾಹನ ಚಾಲನೆಗೆ ಇವರಿಬ್ಬರೂ ಬಲಿಯಾದರು.
10 ನೇ ತರಗತಿಯಲ್ಲಿ ಓದುತ್ತಿದ್ದ ಧ್ಯಾನ್ ಮುಂದಿನ ವಿದ್ಯಾಭ್ಯಾಸಕ್ಕಾಗಿ ಕೆಲ ದಿನಗಳ ಹಿಂದೆಯಷ್ಟೇ ಪ್ರಥಮ ಪಿಯುಸಿಗೆ ದಾಖಲಾಗಿದ್ದ. ಆದರೆ ವಿಧಿ ಆತನ ಬದುಕಿನಲ್ಲಿ ಆಟವಾಡಿದ್ದು, ಸರ್ಕಾರಿ ಬಸ್ ಈತನ ಕನಸು ನುಚ್ಚು ಮಾಡುವ ಜತೆಗೆ ಬದುಕಿಗೇ ಅಂತ್ಯ ಕೊಟ್ಟಿದೆ.
ಅರುಣ್ ಕುಲಾಲ್ ಅವರು ತಮ್ಮ ಕುಟುಂಬದ ಪೋಷಣೆಗಾಗಿ ತನ್ನ ಮನೆಯಲ್ಲಿಯೇ ಮರದ ಸಾಮಾಗ್ರಿಗಳ ರಚನಾ ಕೆಲಸ ನಿರ್ವಹಿಸುತ್ತಿದ್ದರು. ಅವರ ಪತ್ನಿ ಜಯಮಾಲಿನಿ ಬೀಡಿ ಕಟ್ಟುತ್ತಿದ್ದರು. ಬಡಕುಟುಂಬದ ನಿರ್ವಹಣೆಯ ಜತೆಗೆ ಬಿಜೆಪಿ ಪಕ್ಷದ ಸಕ್ರೀಯ ಕಾರ್ಯಕರ್ತನಾಗಿದ್ದ ಅವರು ರಾಜಕೀಯ ಆಸಕ್ತಿಯಿಂದ ನರಿಕೊಂಬು ಗ್ರಾಪಂ ಚುನಾವಣೆಗೆ ನಿಂತಿದ್ದು ಗೆಲುವು ಸಾಧಿಸಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಬಂಟ್ವಾಳ ಸಮಾಜಸೇವಾ ಸಹಕಾರಿ ಬ್ಯಾಂಕ್ ನ ನಿರ್ದೇಶಕರಾಗಿಯೂ ಆಯ್ಕೆಗೊಂಡಿದ್ದರು.
ತಂದೆ ಮತ್ತು ಮಗ ಸುಳ್ಯದ ಮದುವೆಗಾಗಿ ಬೈಕ್‌ನಲ್ಲಿ ಹೊರಿಟ್ಟದರೆ, ತಾಯಿ ಜಯಮಾಲಿನಿ ಅವರು ಬಸ್ಸಿನಲ್ಲಿ ಅದೇ ಮದುವೆಗೆ ಹೊರಟಿದ್ದರು. ಈ ಘಟನೆಯಲ್ಲಿ ತಂದೆ-ಮಗ ಜೀವ ಕಳೆದುಕೊಂಡಿದ್ದರೆ, ಬಸ್ ಪಯಣ ತಾಯಿ ಜೀವವನ್ನು ಕಾಪಾಡಿದೆ.
ಬಡಕುಟುoಬದ ಯಜಮಾನ ಅರುಣ್ ಕುಲಾಲ್ ಹಾಗೂ ಅವರ ಪ್ರಥಮ ಪುತ್ರ ಧ್ಯಾನ್ ಸಾವಿನೊಂದಿಗೆ ಈ ಕುಟುಂಬದ ಅರುಣ್ ಕುಲಾಲ್ ಅವರ ಪತ್ನಿ ಜಯಮಾಲಿನಿ ಮತ್ತು 8ನೇ ತರಗತಿ ಓದುತ್ತಿರುವ ಪುತ್ರ ರೋಶನ್ ಅವರೀಗ ಅನಾಥವಾಗಿದ್ದಾರೆ.ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಕೆಎಸ್ಸಾರ್ಟಿಸಿ ಚಾಲಕನ ಮೇಲೆ ಪ್ರಕರಣ ದಾಖಲಿಸಲಾಗಿದೆ.