ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಘಟನಾ ಸ್ಥಳದಲ್ಲಿ ಕಾಣಿಸಿಕೊಂಡ ಬುರ್ಖಾಧಾರಿ ಮಹಿಳೆಯರನ್ನು ಯಾಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಉದ್ದೇಶಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದ ಬಿಜೆಪಿ ಮಹಿಳಾಮೋರ್ಚಾ ರಾಜ್ಯ ಕಾರ್ಯದರ್ಶಿ, ಮಾಜಿ ಕಾರ್ಪೊರೇಟರ್ ಶ್ವೇತಾ ಪೂಜಾರಿ ಮೇಲೆ ಎಫ್‌ಐಆರ್ (FIR) ದಾಖಲಾಗಿದೆ.
ಶ್ವೇತಾ ಪೂಜಾರಿ ಮೇಲೆ ಎಫ್‌ಐಆರ್ ದಾಖಲಾಗಿದ್ದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಸುಹಾಸ್ ಶೆಟ್ಟಿ ಹತ್ಯೆಯ ಸಂದರ್ಭ ಹಂತಕರ ಜೊತೆ ಮಾತಾಡಿದ್ದ ಇಬ್ಬರು ಬುರ್ಖಾಧಾರಿ ಮಹಿಳೆಯರ ಬಗ್ಗೆ ವ್ಯಾಪಕ ಅನುಮಾನ ವ್ಯಕ್ತವಾಗಿತ್ತು. ಈ ವೇಳೆ ಶ್ವೇತಾ ಪೂಜಾರಿ ಅವರು ಫೇಸ್‌ಬುಕ್ ಪೋಸ್ಟ್ನಲ್ಲಿ ಬುರ್ಖಾಧಾರಿ ಮಹಿಳೆಯರನ್ನು ಯಾಕೆ ಬಂಧಿಸಿಲ್ಲ? ದ.ಕ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಈ ಬಗ್ಗೆ ಯಾಕೆ ಮಾತಾಡುತ್ತಿಲ್ಲ? ಎಂಬರ್ಥದಲ್ಲಿ ಪೋಸ್ಟ್ ಮಾಡಿದ್ದರು. ಇದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ಸದಸ್ಯೆಯೋರ್ವರು ಪೊಲೀಸರಿಗೆ ದೂರು ನೀಡಿದ್ದು, ದೂರು ದಾಖಲಾಗುತ್ತಿದ್ದಂತೆ ಪೊಲೀಸರು ಶ್ವೇತಾ ಪೂಜಾರಿ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ.
ಇದು ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಹಿಂದುತ್ವದ ಪರ ಹೋರಾಟ ಮಾಡುವವರನ್ನು ದಮನಿಸುವ ಹೀನ ಕೆಲಸಕ್ಕೆ ಕಾಂಗ್ರೆಸ್ ಕೈ ಹಾಕಿದೆ. ಈ ಮೂಲಕ ಅಭಿವ್ಯಕ್ತಿ ಸ್ವಾತಂತ್ರ‍್ಯಕ್ಕೆ ಧಕ್ಕೆ ತರಲಾಗುತ್ತಿದೆ ಎಂದು ಆರೋಪಿಸಲಾಗಿದೆ.