ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ದಿಯ ಕೆಲಸ ಆಗುತ್ತಿಲ್ಲ ಎಂದು ಮಾಜಿ ಶಾಸಕರು ಆರೋಪ ಮಾಡಿದ್ದಾರೆ, ಈಗಿನ ಶಾಸಕರು ಏನು ಮಾಡಿದ್ದಾರೆ ಎಂದು ಲೆಕ್ಕ ಹಾಕುವ ಮೊದಲು ತಾನು ಶಾಸಕನಾಗಿದ್ದ ಏನು ಮಾಡಿದ್ದಾರೆ ಎಂಬುದನ್ನು ಅರಿತುಕೊಂಡು ಮಾತನಾಡಲಿ ಎಂದು ಶಾಸಕ ಅಶೋಕ್ ರೈ ಅವರು ಮಾಜಿ ಶಾಸಕ ಸಂಜೀವ ಮಠಂದೂರು ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಅವರು ನೆಕ್ಕಿಲಾಡಿಯಲ್ಲಿ ನಡೆದ ಅಕ್ರಮ ಸಕ್ರಮ ಬೈಠಕ್ ಉದ್ಘಾಟಿಸಿ ಮಾತನಾಡಿದರು. ತನ್ನ ನೆರೆಮನೆಯ ವ್ಯಕ್ತಿಯ ಅಕ್ರಮ ಸಕ್ರಮ ಮಾಡಲು ಯೋಗ್ಯತೆ ಇಲ್ಲದ ಇವರು ಉಳಿದವರ ಬಗ್ಗೆ ಏನು ಮಾತನಾಡುತ್ತಾರೆ.
ಮೆಡಿಕಲ್ ಕಾಲೇಜು ಬಜೆಟ್ ನಲ್ಲಿ ಘೋಷಣೆಯಾದಾಗ ಅಪಸ್ವರ ಎತ್ತಿದ್ದ ಇವರಿಗೆ ಮೆಡಿಕಲ್ ಕಾಲೇಜಿನ ಕಡತ ಸರಕಾರಕ್ಕೆ ತಲುಪಿಸಲು ಸಾಧ್ಯವಾಗಿಲ್ಲ. ಉಪ್ಪಿನಂಗಡಿಗೆ ಮಾಜಿ ಶಾಸಕರು ಏನಾದರೂ ಕೊಡುಗಡೆ ನೀಡಿದ್ದಾರ? ತನ್ನ ಗ್ರಾಮದವರಿಗೆ ನೆರವು ನೀಡಲೂ ಯೋಗ್ಯತೆ ಇಲ್ಲದ ಮಾಜಿ ಶಾಸಕರು ಅವರ ಅವಧಿಯ 5 ವರ್ಷದಲ್ಲಿ ಮಾಡಿದ್ದು ಏನು ಎಂಬುದು ಜನತೆಗೆ ಗೊತ್ತಿದೆ ಎಂದು ಹೇಳಿದರು.
ನಾವು ಅಕ್ರಮ ಸಕ್ರಮಕ್ಕೆ ಲಂಚ ಪಡೆಯುತ್ತಿಲ್ಲ, ಈ ಹಿಂದೆ ದುಡ್ಡು ಕೊಟ್ಟವರ ಕಡತವನ್ನು ಮಾತ್ರ ವಿಲೇವಾರಿ ಮಾಡಿದ್ದರು, ಬಡವರ ಕಡತವನ್ನು ಯಾಕೆ ಮುಟ್ಟಿಲ್ಲ? ಎಂದು ಪ್ರಶ್ನಿಸಿದ ಶಾಸಕರು 9 ಸೆಂಟ್ಸ್ 94 ಸಿ ಹಕ್ಕು ಪತ್ರ ಕೊಡದವರು ಇತರರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ.ನಾನು ಶಾಸಕನಾದ ಬಳಿಕ 1600 94 ಸಿ ಮತ್ತು ಸಿ ಸಿ ಯನ್ನು ಕೊಟ್ಟಿದ್ದೇನೆ 1500 ಕ್ಕೂಮಿಕ್ಕಿ ಅಕ್ರಮ ಸಕ್ರಮ ಕಡತ ವಿಲೇವಾರಿಯಾಗಿದೆ.
ಉಪ್ಪಿನಂಗಡಿ ಸಹಸ್ರಲಿಂಗೇಶ್ಚರ ದೇವಸ್ಥಾನ, ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನ ದ ಅಭಿವೃದ್ದಿ ಮಾಡುತ್ತಿದ್ದೇವೆ, ಮೆಡಿಕಲ್ ಕಾಲೇಜು ಬಂದಿದೆ, ತಾಲೂಕು ಕ್ರೀಡಾಂಗಣ, ಆರ್ ಟಿ ಒ ಟ್ರ್ಯಾಕ್, ಕೊಯಿಲ ಪಶು ವೈದ್ಯಕೀಯ ಕಾಲೇಜು ಮತ್ತು ಕೆಎಂಎಫ್ ಗೆ ಜಮೀನು ಮಂಜೂರಾಗಿದೆ. ಉಳಿದಂತೆ ಇತರೆ ಕಾಮಗಾರಿಗೆ ಎಷ್ಟು ಕೋಟಿ ಅನುದಾನ ಬಂದಿದೆ ಎಂಬುದನ್ನು ಮಾಜಿ ಶಾಸಕರು ಪರಿಶೀಲನೆ ಮಾಡಲಿ ಎಂದು ಹೇಳಿದರು.
ಹಿಂದುತ್ವದ ಬಗ್ಗೆ ಭಾಷಣಮಾಡ್ತಾರೆ..ದೇವಸ್ಥಾನದ ಮೇಲೆ ಕೇಸ್ ಹಾಕ್ತಾರೆ…..!!!
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾಗದಲ್ಲಿ ಅಕ್ರಮವಾಗಿ ವಾಸಮಾಡಿಕೊಂಡಿದ್ದು ಮಾತ್ರವಲ್ಲದೆ ದೇವಸ್ಥಾನದ ಜಾಗದಿಂದ ಎಬ್ಬಿಸಿದ್ದಕ್ಕಾಗಿ ಶ್ರೀ ಮಹಾಲಿಂಗೇಶ್ವರ ದೇವರ ಮೇಲೆಯೇ ಕೇಸು ಹಾಕಿದ್ದಾರೆ. ಹೊರಗಡೆ ವೋಟಿಗಾಗಿ ಹಿಂದುತ್ವದ ಭಾಷಣ ಮಾಡುವುದು ಇವರೇ..ದೇವರ ಮೇಲೆ ಕೇಸು ಹಾಕುವುದು ಇವರೇ ಇವರದ್ದು ಎಂಥಾ ಹಿಂದುತ್ವ ಎಂದು ಶಾಸಕರು ಲೇವಡಿ ಮಾಡಿದರು.
ವೇದಿಕೆಯಲ್ಲಿ ತಹಶಿಲ್ದಾರ್ ಪುರಂದರ ಹೆಗ್ಡೆ, ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು, ರೂಪರೇಖಾ ಆಲ್ವ, ರಾಮಣ್ಣ ಪಿಲಿಂಜ,ನೆಕ್ಕಿಲಾಡಿ ಗ್ರಾಪಂ ಅಧ್ಯಕ್ಷೆ ಸುಜಾತಾ ರೈ, ಉಪಾಧ್ಯಕ್ಷ ಹರೀಶ್ ಉಪಸ್ಥಿತರಿದ್ದರು.