ಮೂಡುಬಿದಿರೆ: ತೆಂಕಮಿಜಾರು ಗ್ರಾ.ಪಂ. ವ್ಯಾಪ್ತಿಯ ಬಡಗಮಿಜಾರು ಗ್ರಾಮದ ಮರಕಡ ಬಳಿ ಇಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಡಗ ಮಿಜಾರಿನ ನಮೀಕ್ಷಾ ಶೆಟ್ಟಿ (29) ಹಾಗೂ ಆಕೆಯ ಪ್ರಿಯಕರ ಎನ್ನಲಾದ, ಚಾಲಕ ವೃತ್ತಿಯ ನಿಗ್ಗೋಡಿಯ ಪ್ರಶಾಂತ್ ಆತ್ಮಹತ್ಯೆ ಮಾಡಿಕೊಂಡವರು.
ನಮೀಕ್ಷಾ ವಿವಾಹಿತೆ. ಇಬ್ಬರು ಗಂಡುಮಕ್ಕಳ ತಾಯಿ. ಗಂಡ ಸತೀಶ್ ಪುಣೆಯಲ್ಲಿ ಉದ್ಯೋಗದಲ್ಲಿದ್ದಾರೆ. ಪ್ರಶಾಂತ್ ಮೂಲತಃ ಬಾಗಲಕೋಟೆಯ ನಿವಾಸಿ. ಆತನಿಗೂ ಮದುವೆಯಾಗಿದೆ.
ಇನ್‌ಸ್ಟಾಗ್ರಾಂ ಮೂಲಕ ಇವರಿಬ್ಬರ ಪರಿಚಯವಾಗಿ ಅದು ಪ್ರೇಮಸಂಬಂಧಕ್ಕೆ ತಿರುಗಿದೆ. ಯಾವುದೋ ಕಾರಣಕ್ಕೆ ಇಬ್ಬರ ಮಧ್ಯೆ ಜಗಳ ಪ್ರಾರಂಭಗೊಂಡಿದೆ ಎನ್ನಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತದೇಹಗಳನ್ನು ಅಗ್ನಿಶಾಮಕ ಸಿಬಂದಿ ಮೇಲೆತ್ತಿದ್ದಾರೆ.
ನಮೀಕ್ಷಾಳ ತಂದೆ ಹಾಗೂ ಪ್ರಶಾಂತ್‌ನ ಸಹೋದರ ಪ್ರತ್ಯೇಕವಾಗಿ ನೀಡಿರುವ ದೂರುಗಳ ಮೇರೆಗೆ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ. ಜಿ. ಪ್ರಕರಣ ದಾಖಲಿಸಿಕೊಂಡಿದ್ದಾರೆ.



























