ಕಾರ್ಕಳ: ಅದೆಷ್ಟೋ ಕಂಬಳ ಕರೆಗಳಲ್ಲಿ ಓಡಿ, ಪ್ರಶಸ್ತಿಗೆ ಕೊರಳೊಡ್ಡಿದ್ದ ಕೋಣಗಳೆರಡು ಯಾರೂ ಊಹಿಸದ ರೀತಿಯಲ್ಲಿ ಇಹಲೋಕ ತ್ಯಜಿಸಿದೆ. ಕಾರ್ಕಳ ತಾಲೂಕಿನ ಕಾಂತಾವರ ಗ್ರಾಮದ ಬೇಲಾಡಿ ಎಂಬಲ್ಲಿ ಹಟ್ಟಿಯಲ್ಲಿ ಅಗ್ನಿ ಅವಘಡ ಸಂಭವಿಸಿ ಎರಡು ಕಂಬಳ ಕೋಣಗಳು ಅಸುನೀಗಿವೆ.
ಬೇಲಾಡಿ ಬಾವ ಅಶೋಕ್ ಶೆಟ್ಟಿ ಅವರಿಗೆ ಸೇರಿದ ಹಟ್ಟಿಯಲ್ಲಿ ಈ ಘಟನೆ ನಡೆದಿದೆ. ಶನಿವಾರ (ಮೇ 31) ಮುಂಜಾನೆ ಕೆಲಸದಾಳು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಹಲವು ಕಂಬಳ ಕೂಟಗಳಲ್ಲಿ ಬಹುಮಾನ ಪಡೆದಿದ್ದ ಅಪ್ಪು ಮತ್ತು ತೋನ್ಸೆ ಎಂಬ ಕೋಣಗಳು ಮೃತಪಟ್ಟಿವೆ.ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಘಟನೆ ನಡೆದಿದೆ ಎನ್ನಲಾಗಿದೆ. ಕಾರಣ ಇನ್ನಷ್ಟೇ ತಿಳಿಯಬೇಕಿದೆ.
ಹಲವು ಸಾಧನೆ ಮಾಡಿದ ತೋನ್ಸೆ-ಅಪ್ಪು
ಅಪ್ಪು ಮತ್ತು ತೋನ್ಸೆ ಕೋಣಗಳು 2022-23 ಋತುವಿನ ಕಂಬಳದಲ್ಲಿ ಕನೆಹಲಗೆ ವಿಭಾಗದಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದವು. ಅದರಲ್ಲೂ ತೋನ್ಸೆ ಕೋಣವು ನೇಗಿಲು ಕಿರಿಯ, ನೇಗಿಲು ಹಿರಿಯ ಹಗ್ಗ ಹಿರಿಯ, ಅಡ್ಡ ಹಲಗೆ, ಕನೆಹಲಗೆ ವಿಭಾಗದಲ್ಲಿ ಸ್ಪರ್ಧಿಸಿ ಎಲ್ಲಾ ವಿಭಾಗದಲ್ಲಿ ಪ್ರಶಸ್ತಿ ಪಡೆದು ಸಾಧನೆ ಮಾಡಿದೆ.
ಸುಮಾರು 14-15 ವರ್ಷಗಳಿಂದ ತೋನ್ಸೆಯಿಂದ ಅಲೆವೂರು ತೆಂಕುಮನೆ ರಾಘು ಶೆಟ್ಟಿ ಅವರು ಕುಟ್ಟಿ ಎಂಬ ಕೋಣವನ್ನು ತಂದಿದ್ದರು. ಅದು ಮುಂದೆ ತೋನ್ಸೆ ಕುಟ್ಟಿ ಎಂದೇ ಹೆಸರು ಪಡೆಯಿತು. ಅಲೆವೂರು ರಾಘು ಶೆಟ್ರ ಯಜಮಾನಿಕೆಯಲ್ಲಿ ತಡಂಬೈಲು ಕುಟ್ಟಿ ಜತೆ ಜೂನಿಯರ್ ವಿಭಾಗದಲ್ಲಿ ಎರಡು ಬಾರಿ ಚಾಂಪಿಯನ್ ಶಿಪ್, ಹಿರಿಯ ವಿಭಾಗದಲ್ಲಿ ಎರಡು ವರ್ಷ ಚಾಂಪಿಯನ್‌ಶಿಪ್ ಪಡೆದ ಸಾಧನೆ ತೋನ್ಸೆ ಕೋಣದ್ದು.
ಬಳಿಕ ಹಗ್ಗ ಹಿರಿಯ ವಿಭಾಗದಲ್ಲಿ ಮೂಡುಬಿದಿರೆ ಕರಿಂಜೆ ವಿನು ವಿಶ್ವನಾಥ ಶೆಟ್ಟಿ ಅವರು ಓಡಿಸಿ ಮೆಡಲ್ ಪಡೆದಿದ್ದರು. ಬಳಿಕ ಬೇಲಾಡಿಗೆ ಬಂದ ತೋನ್ಸೆ ಅಡ್ಡ ಹಲಗೆ, ಕನಹಲಗೆ ವಿಭಾಗದಲ್ಲಿ ಕಳೆದ ನಾಲೈಲೆದು ವರ್ಷಗಳಲ್ಲಿ ಹಲವಾರು ಮೆಡಲ್ ಪಡೆದಿದೆ. 2022-23 ಸೀಸನ್ ನಲ್ಲಿ ಚಾಂಪಿಯನ್ ಪಟ್ಟ ಪಡೆದ ತೋನ್ಸೆ ಕಳೆದ ಸೀಸನ್ ನಲ್ಲಿ ಒಂದು ಮೆಡಲ್ ಪಡೆದಿತ್ತು.
ಮತ್ತೊಂದು ಕೋಣ ಅಪ್ಪು ಕನೆಹಲಗೆ ಮತ್ತು ಅಡ್ಡಹಲಗೆ ವಿಭಾಗದಲ್ಲಿ ಸಾಧನೆ ಮಾಡಿದ ಕೋಣ. ತಡಂಬೈಲಿನಿಂದ ತಂದ ಕೋಣ ಬಳಿಕ ನಾರಾವಿ ಯುವರಾಜ್ ಜೈನ್ ಮತ್ತು ಬೇಲಾಡಿ ಮನೆಯ ಹೆಸರಿನಲ್ಲಿ ಹಲವು ಪ್ರಶಸ್ತಿ ಪಡೆದಿತ್ತು.