ಮೇಘಾಲಯದ ಚಿರಾಪುಂಜಿ ಬಳಿ ಮಧ್ಯಪ್ರದೇಶದ ಇಂದೋರ್ ದಂಪತಿ ಹನಿಮೂನ್ಗೆ ಬಂದು ಏಕಾಏಕಿ ನಾಪತ್ತೆ ಆಗಿರೋದು ಭಾರೀ ಸಂಚಲನ ಮೂಡಿಸಿತ್ತು. ಇದೀಗ ನಾಪತ್ತೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ.
ಏನಿದು ಪ್ರಕರಣ..? ಸೋನಂ ಮತ್ತು ರಾಜಾ ರಘುವಂಶಿ ಹನಿಮೂನ್ಗೆ ಬಂದು ನಾಪತ್ತೆ ಆಗಿದ್ದ ದಂಪತಿ. ಇವರು ಮಧ್ಯ ಪ್ರದೇಶದ ಇಂಧೋರ್ ಮೂಲದವರು. ನವವಿವಾಹಿತ ಈ ಜೋಡಿ ಹನಿಮೂನ್ಗಾಗಿ ಮೇಘಾಲಯದ ಪೂರ್ವ ಖಾಸಿ ಬೆಟ್ಟಗಳಿಗೆ ಬಂದಿತ್ತು. ಮೇ 23 ರಂದು ದಿಢೀರ್ ನಾಪತ್ತೆಯಾಗಿತ್ತು. ಅಂದಿನಿಂದ ಅವರಿಗಾಗಿ ಹುಡುಕಾಟ ಶುರುವಾಗಿತ್ತು. ಅಲ್ಲದೇ ರಾಜಾ ರಘುವಂಶಿ ಕುಟುಂಬ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿತ್ತು. ಇದೀಗ ಅಸಲಿ ವಿಚಾರ ಬಯಲಾಗಿದೆ.
ತೀವ್ರ ಹುಡುಕಾಟ ನಂತರ ಜೂನ್ 2 ರಂದು ರಾಜಾ ರಘುವಂಶಿಯ ಛಿದ್ರಗೊಂಡ ಮೃತದೇಹ ಹಳ್ಳದಲ್ಲಿ ಪತ್ತೆಯಾಗಿತ್ತು. ಆದರೆ ಅವರ ಪತ್ನಿ ಸೋನಂ ಪತ್ತೆ ಆಗಿರಲಿಲ್ಲ. ಹೀಗಾಗಿ ಪೊಲೀಸರು ಸ್ಥಳೀಯರು ಹಾಗೂ ಪ್ರವಾಸಿ ಗೈಡ್ಗಳ ವಿಚಾರಣೆಯನ್ನು ಮುಂದುವರಿಸಿದ್ದರು.
ಹನಿಮೂನ್ಗೆ ಬಂದ ಜೋಡಿಗಳನ್ನು ಯಾರೂ ಅಪಹರಿಸಿದ್ದಲ್ಲ. ದುಷ್ಕರ್ಮಿಗಳೂ ಜೀವ ತೆಗೆದು ಬಿಸಾಡಿಲ್ಲ. ಬದಲಾಗಿ ರಾಜಾ ರಂಘುವಂಶಿಯ ಪತ್ನಿಯೇ ಮಾಡಿದ ಮಾಸ್ಟರ್ ಪ್ಲಾನ್ ಎಂದು ಗೊತ್ತಾಗಿದೆ. ಇದೀಗ ಮೇಘಾಲಯದ ಪೊಲೀಸರಿಗೆ ಪತ್ನಿ ಸೋನಂ ಶರಣಾಗಿದ್ದಾಳೆ. ಪತಿಯನ್ನು ತಾನೇ ಮುಗಿಸಿರೋದಾಗಿ ಆಕೆ ಹೇಳಿಕೊಂಡಿದ್ದಾಳೆ.
ಮಧ್ಯಪ್ರದೇಶದಿಂದ 4 ಮಂದಿ ಹಂತಕರು ಮೇಘಾಲಯಕ್ಕೆ ಬಂದು ಕೃತ್ಯ ನಡೆಸಲಾಗಿದೆ. ಈ ಪೈಕಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ರಾಜಾ ರಘುವಂಶಿ ಮುಗಿಸಿ ಬಳಿಕ ಆರೋಪಿ ಸೋನಂ ನಾಪತ್ತೆಯಾಗಿದ್ದಳು. ಜೂನ್, 2 ರಂದು ಮೃತದೇಹ ಸಿಕ್ಕಿದ ಮೇಲೆ, ಪೊಲೀಸರಿಗೆ ಸೋನಂ ಮೇಲೆ ಅನುಮಾನ ಕಾಡಿತ್ತು. ಅಲ್ಲದೇ ಪ್ರವಾಸಿ ಗೈಡ್ಗಳ ವಿಚಾರಣೆಯಲ್ಲಿ ಈ ಜೋಡಿ ಮೂವರು ಪುರುಷರ ಜೊತೆ ಇರೋದಾಗಿ ತಿಳಿದುಬಂದಿತ್ತು.