ಉಪ್ಪಿನಂಗಡಿ: 34 ನೆಕ್ಕಿಲಾಡಿಯಲ್ಲಿ ಕುಮಾರಧಾರ ನದಿ ದಡದಲ್ಲಿ ಮೊಸಳೆಯೊಂದು ಪತ್ತೆಯಾಗಿದೆ. ಮೊಸಳೆ ನೋಡಲು ಹೋದವರನ್ನು ಕಂಡು ಮೊಸಳೆಯು ನದಿ ನೀರಿಗೆ ಇಳಿದು ಹೋದ ಘಟನೆ ಜೂ.18ರಂದು ಸಂಜೆ ನಡೆದಿದೆ.
ಇಲ್ಲಿನ ಶೇಖಬ್ಬ ಹಾಜಿ ಎಂಬವರ ಮನೆ ಬಳಿ ಕುಮಾರಧಾರ ನದಿಗಿಳಿಯುವ ದಾರಿಯ ಬಳಿ ನದಿ ದಡದಲ್ಲಿ ಮೊಸಳೆಯು ವಿಶ್ರಾಂತಿ ಪಡೆಯುವುದನ್ನು ಮಕ್ಕಳು ದೂರದಿಂದ ಕಂಡಿದ್ದರು.
ನದಿ ದಡದಲ್ಲಿ ಏನೋ ಮಲಗಿದೆ ಎಂದು ಮಕ್ಕಳು ಸ್ಥಳೀಯ ನಿವಾಸಿಗಳಾದ ಆಝೀಝ್ ಹಾಗೂ ಇತರರಲ್ಲಿ ತಿಳಿಸಿದ್ದು, ಅವರು ಅದೇನೆಂದು ನೋಡಲು ಹೋದಾಗ ಮೊಸಳೆಯು ನದಿ ದಡದಲ್ಲಿ ಕಂಡು ಬಂತು.
ಇವರು ಸ್ವಲ್ಪ ಹತ್ತಿರಕ್ಕೆ ಹೋದಾಗ ಮೊಸಳೆಯು ಮತ್ತೆ ನದಿ ನೀರಿಗೆ ಇಳಿದು ನಾಪತ್ತೆಯಾಗಿದೆ. ಎರಡು ವರ್ಷಗಳ ಹಿಂದೆ ಪಂಜಳದ ನೇತ್ರಾವತಿ ನದಿಯಲ್ಲಿಯೂ ದೊಡ್ಡ ಮೊಸಳೆಗಳೆರಡು ಪ್ರತ್ಯಕ್ಷವಾಗಿದ್ದವು.
ಕಳೆದ ವರ್ಷ ಉಪ್ಪಿನಂಗಡಿಯ ಎಚ್.ಎಂ. ಅಡಿಟೋರಿಯಂ ಬಳಿಯೂ ನೇತ್ರಾವತಿ ನದಿ ದಡದಲ್ಲಿ ದೊಡ್ಡ ಗಾತ್ರದ ಮೊಸಳೆಯೊಂದು ಪ್ರತ್ಯಕ್ಷವಾಗಿತ್ತು.