ಪುತ್ತೂರು: ಖುರ್ರತುಸ್ಸಾದಾತ್ ಕೂರತ್ ತಂಞಳ್ ಉರೂಸ್ ಪ್ರಯುಕ್ತ ರವಿವಾರ ನಡೆದ ಮಹಾ ಅನ್ನದಾನಕ್ಕೆ ಜನ ಸಾಗರ ಹರಿದು ಬಂದಿದ್ದು ಜನದಟ್ಟಣೆಗೆ ಸಿಲುಕಿ ಕೆಲವರು ಅಸ್ವಸ್ಥಗೊಂಡ ಘಟನೆ ನಡೆದಿದೆ.
ರಾಜ್ಯದ ವಿವಿಧ ಕಡೆಗಳಿಂದ ಮತ್ತು ಕೇರಳದಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಅನ್ನದಾನ ಸ್ವೀಕರಿಸಿದ್ದು ಈ ವೇಳೆ ಕೆಲವರು ತಾಸುಗಟ್ಟಲೇ ನಿಂತ ಪರಿಣಾಮ ಅಸ್ವಸ್ಥಗೊಂಡರು. ತಕ್ಷಣ ಪುತ್ತೂರು ಸರಕಾರಿ ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ಹಾಗೂ ಆರೋಗ್ಯ ಸಿಬಂದಿಗಳು ಆಗಮಿಸಿ ತುರ್ತು ಚಿಕಿತ್ಸೆ ನೀಡಿದ್ದಾರೆ. ಮೂವರನ್ನು ಹೆಚ್ಚಿನ ಚಿಕಿತ್ಸಗೆ ಮಂಗಳೂರಿಗೆ ಕರೆದೊಯ್ಯಲಾಗಿದೆ.
ಬೆಳಗ್ಗಿನಿಂದಲೇ ಕೂರತ್ನಲ್ಲಿ ಜನರು ಕಿಕ್ಕಿರಿದು ಸೇರಿದ್ದು, ಮಧ್ಯಾಹ್ನದ ವೇಳೆಯಂತೂ ಸವಣೂರುವರೆಗೂ ಟ್ರಾಫಿಕ್ ಜಾಂ ಉಂಟಾಗಿತ್ತು. ಸ್ವಯಂ ಸೇವಕರು ಮತ್ತು ಪೊಲೀಸರು ಟ್ರಾಫಿಕ್ ಕಂಟ್ರೋಲ್ ಮಾಡುತ್ತಿದ್ದರೂ ಸುಸೂತ್ರವಾಗಿ ನಿಭಾಯಿಸುವುದು ತ್ರಾಸದಾಯಕವಾಗಿತ್ತು.