ಮಧ್ಯಪ್ರದೇಶದಲ್ಲಿ ಮತ್ತೊಂದು ಭೀಕರ ಹತ್ಯೆ ನಡೆದಿದೆ. ನರಸಿಂಗಪುರ ಜಿಲ್ಲಾಸ್ಪತ್ರೆಯಲ್ಲಿ ಎಲ್ಲರ ಮುಂದೆ 12ನೇ ತರಗತಿ ವಿದ್ಯಾರ್ಥಿನಿಯ ಕುತ್ತಿಗೆ ಕುಯ್ದು ಜೀವ ತೆಗೆಯಲಾಗಿದೆ. ಪ್ರೇಮಿಯೊಬ್ಬ ಸಂಧ್ಯಾ ಚೌಧರಿ ಎಂಬ ವಿದ್ಯಾರ್ಥಿನಿಯ ಹತ್ಯೆ ಮಾಡಿದ್ದಾನೆ. 19 ವರ್ಷದ ವಿದ್ಯಾರ್ಥಿನಿಯನ್ನು ಭೀಕರವಾಗಿ ಹತ್ಯೆಗೈದ ಆರೋಪಿ ಅಭಿಷೇಕ್ ಕೌಸ್ತಿ ಎಂದು ಗುರುತಿಸಲಾಗಿದೆ.
ಅಭಿಷೇಕ್ ಕೌಸ್ತಿ, ಆಸ್ಪತ್ರೆಯಲ್ಲಿ ಎಲ್ಲರೆದುರೇ ಯುವತಿಯನ್ನು ಹತ್ಯೆ ಮಾಡುತ್ತಿದ್ದರೂ, ಯಾರೊಬ್ಬರು ಮಾನವೀಯತೆಯನ್ನು ತೋರಿಲ್ಲ ಎಂಬುದು ಅಶ್ಚರ್ಯಕರ. ಜನರೆಲ್ಲರೂ, ಯುವತಿಯನ್ನು ರಕ್ಷಿಸದೇ, ದೂರದಲ್ಲಿ ನಿಂತು ಹತ್ಯೆಯನ್ನು ನೋಡುತ್ತಾ ನಿಂತಿದ್ದಾರೆ. ಜನರನ್ನು ರಕ್ಷಿಸಬೇಕಾದ, ಜೀವ ಉಳಿಸಬೇಕಾದ ಆಸ್ಪತ್ರೆಯಲ್ಲೇ ಯುವತಿಯ ಹತ್ಯೆ ಆಗಿರೋದು ವಿಪರ್ಯಾಸ. ಸಂಧ್ಯಾ ಚೌಧರಿಯನ್ನು ಕೆಳಕ್ಕೆ ಕೆಡವಿ ಎದೆಯ ಮೇಲೆ ಕುಳಿತು ಕುತ್ತಿಗೆ ಕುಯ್ದು ಅಭಿಷೇಕ್ ಕೌಸ್ತಿ ಹತ್ಯೆ ಮಾಡಿದ್ದಾನೆ. ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್ ನಲ್ಲಿ 10 ನಿಮಿಷದವರೆಗೂ ಯುವತಿಯ ಹತ್ಯೆಯ ಕೃತ್ಯ ನಡೆದಿದೆ.
ಬಳಿಕ ತಾನು ಕುತ್ತಿಗೆ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತ್ಮಹತ್ಯೆ ಸಾಧ್ಯವಾಗದೇ ಸ್ಥಳದಿಂದ ಬೈಕ್ ಹತ್ತಿ ಆರೋಪಿ ಯುವಕ ಅಭಿಷೇಕ ಕೌಸ್ತಿ ಪರಾರಿಯಾಗಿದ್ದಾನೆ. ಈ ಹತ್ಯೆಯ ಕೃತ್ಯವನ್ನು ಆಸ್ಪತ್ರೆಯ ವೈದ್ಯರು, ಆಸ್ಪತ್ರೆಯ ಸಿಬ್ಬಂದಿಯೇ ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡುತ್ತಾ ನಿಂತಿದ್ದರಂತೆ. ಮೂರು ನಾಲ್ಕು ಮಂದಿ ಸೇರಿಕೊಂಡು ಅಭಿಷೇಕ್ ಕೌಸ್ತಿಯನ್ನು ಹಿಡಿಯಲು ಅವಕಾಶ ಇತ್ತು. ಯಾರೊಬ್ಬರು ಆರೋಪಿಯನ್ನು ಹಿಡಿಯಲು ಹೋಗಿಲ್ಲ.
ಆಸ್ಪತ್ರೆ ಹೊರಗೆ ಸೆಕ್ಯೂರಿಟಿ ಗಾರ್ಡ್, ಒಳಗೆ ಹತ್ತಾರು ಜನರಿದ್ದರೂ ಯಾರೂ ಹತ್ಯೆಯನ್ನು ತಡೆದಿಲ್ಲ. ಆಸ್ಪತ್ರೆಗೆ ದಾಖಲಾಗಿದ್ದ ಸ್ನೇಹಿತರೊಬ್ಬರನ್ನು ನೋಡಲು ಆಸ್ಪತ್ರೆಗೆ ಸಂಧ್ಯಾ ಚೌಧರಿ ಬಂದಿದ್ದರು. ಆಸ್ಪತ್ರೆಯ ಬಳಿಯೇ ಬೆಳಿಗ್ಗೆಯಿಂದ ಕಾಯುತ್ತಾ ಕುಳಿತಿದ್ದ ಅಭಿಷೇಕ್ ಕೌಸ್ತಿ, ಆಕೆ ಬರುತ್ತಿದ್ದಂತೆ, ಕೆಳಕ್ಕೆ ಕೆಡವಿ ಹತ್ಯೆ ಮಾಡಿದ್ದಾನೆ. ಮಧ್ಯಾಹ್ನ 3 ಗಂಟೆಯ ವೇಳೆಗೆ ಸಂಧ್ಯಾ ಚೌಧರಿ ಪೋಷಕರು, ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. ಕುಟುಂಬಸ್ಥರು ಬರುವವರೆಗೂ ಸಂಧ್ಯಾ ಚೌಧರಿ ಶವ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್ ನಲ್ಲಿ ನೆಲದ ಮೇಲೆಯೇ ಇತ್ತು. ಬಳಿಕ ಸಂಧ್ಯಾ ಚೌಧರಿ ಪೋಷಕರು, ಕುಟುಂಬಸ್ಥರು ಆಸ್ಪತ್ರೆ ಎದುರಿನ ರಸ್ತೆ ಬಂದ್ ಮಾಡಿ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆ. ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವುದಾಗಿ ಪೊಲೀಸರು ಭರವಸೆ ನೀಡಿದ ಬಳಿಕ ಶವವನ್ನು ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಈ ಅಭಿಷೇಕ್ ಕೌಸ್ತಿ , ಯುವತಿಯನ್ನು ಒನ್ ಸೈಡ್ ಲವ್ ಮಾಡುತ್ತಿದ್ದ. ಈತನ ಪ್ರೀತಿಯನ್ನು ತಿರಸ್ಕರಿಸಿದ್ದಕ್ಕೆ ಸಿಟ್ಟಾಗಿ ಈ ಹತ್ಯೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಹತ್ಯೆಯ ಬಗ್ಗೆ ನರಸಿಂಗಪುರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.