ಪುತ್ತೂರು : ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿಯನ್ನಾಗಿಸಿ ನಂತರ ಮದುವೆಗೆ ನಿರಾಕರಿಸಿದ ಪ್ರಕರಣದ ಸಂತ್ರಸ್ಥೆ ನಿವಾಸಕ್ಕೆ ಜನವಾದಿ ಮಹಿಳಾ ಸಂಘಟನೆ, ಸಾಮರಸ್ಯ ಮಂಗಳೂರು ಸಹಿತ ವಿವಿಧ ಮಹಿಳಾ ಸಂಘಟನೆಗಳ ಪ್ರಮುಖರು ಭೇಟಿ ನೀಡಿ ಧೈರ್ಯ ತುಂಬಿದರು.
ಮದುವೆಯಾಗುವ ಭರವಸೆ ನೀಡಿ, ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ ನಂತರ ರಾಜಕೀಯ ಬೆಂಬಲದಿಂದ ತಲೆ ಮರೆಸಿಕೊಂಡಿರುವ ಕೃಷ್ಣ ರಾವ್ ನನ್ನು ಬಂಧಿಸಬೇಕು. ಗರ್ಭಪಾತಕ್ಕೆ ಒತ್ತಾಯಿಸಿ ಹಣದ ಆಮಿಷ ಒಡ್ಡಿದ ಸಂಘಟನೆಗಳ ಪ್ರಮುಖರನ್ನು ತನಿಖೆಗೆ ಒಳಪಡಿಸಬೇಕು ಎಂದು ಮಹಿಳಾ ನಾಯಕರು ಈ ಸಂದರ್ಭ ಆಗ್ರಹಿಸಿದರು.
ನ್ಯಾಯ ಒದಗಿಸದಿದ್ದಲ್ಲಿ ಜಿಲ್ಲೆಯ ಜನಪರ ಮಹಿಳಾ ಸಂಘಟನೆಗಳನ್ನು ಜತೆ ಸೇರಿಸಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ನಿಯೋಗ ಎಚ್ಚರಿಸಿತು.
ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ, ಮಾಜಿ ಕಾರ್ಪೊರೇಟರ್ ಜಯಂತಿ ಶೆಟ್ಟಿ, ಸಾಮರಸ್ಯ ಮಂಗಳೂರಿನ ಮಂಜುಳಾ ನಾಯಕ್, ದಲಿತ ಹಕ್ಕುಗಳ ಸಮಿತಿಯ ಈಶ್ವರಿ ಪದ್ಮುಂಜ, ನ್ಯಾಯವಾದಿ ಶೈಲಜಾ ಅಮರನಾಥ್, ಜನವಾದಿ ಮಹಿಳಾ ಸಂಘಟನೆಯ ಪ್ರಮೀಳಾ ಕಾವೂರು, ಅಸುಂತಾ ಡಿ ಸೋಜಾ, ಪ್ರಮೀಳಾ ದೇವಾಡಿಗ, ಪ್ಲೇವಿ ಕ್ರಾಸ್ತಾ ನಿಯೋಗದಲ್ಲಿ ಇದ್ದರು.