ಸುಬ್ರಹ್ಮಣ್ಯದ ಸರ್ಕಾರಿ ಆಸ್ಪತ್ರೆಯ ಅಂಬ್ಯುಲೆನ್ಸ್ ಚಾಲಕ ಹೊನ್ನಪ್ಪ ಗೌಡ ಇವರು ನಾಪತ್ತೆಯಾಗಿ ನಾಲ್ಕನೇ ದಿನ ಆಗಿದ್ದು, ನಾಲ್ಕು ದಿನಗಳಿಂದ ಶೋಧ ಕಾರ್ಯ ನಡೆದಿದ್ದು ಇಂದು ಹೊನ್ನಪ್ಪ ಅವರ ಮೃತದೇಹ ಪತ್ತೆಯಾಗಿರುವುದಾಗಿ ವರದಿಯಾಗಿದೆ .
ಮೂರು ದಿನಗಳಿಂದ ಎಸ್.ಡಿ.ಆರ್.ಎಫ್, ಮಲ್ಪೆ ಈಶ್ವರ ತಂಡ, ಅಗ್ನಿ ಶಾಮಕ ತಂಡ, ಅಂಬ್ಯೂಲೆನ್ಸ್ ಚಾಲಕ ಮಾಲಕರ ತಂಡ ಶೋಧ ಕಾರ್ಯದಲ್ಲಿ ಪಾಲ್ಗೊಂಡಿದ್ದು, ರವಿ ಕಕ್ಕೆಪದವು ಆದಿಯಾಗಿ ನೂರಾರು ಜನ ಶೋಧ ಕಾರ್ಯದಲ್ಲಿ ಭಾಗವಹಿಸಿದ್ದರು. ಇಂದು ಕುಮಾರಧಾರ ಸೇತುವೆಯಿಂದ ಮೂರು ಕಿ.ಮೀ. ಕೆಳಗಡೆ ನದಿಯಲ್ಲಿ ಮೃತದೇಹ ದೊರೆಯಿತೆಂದು ತಿಳಿದುಬಂದಿದೆ. ಗ್ರಾ.ಪಂಚಾಯತ್, ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿ ಕಾರ್ಯಾಚರಣೆಗೆ ಪೂರ್ಣ ಸಹಕಾರ ನೀಡಿತ್ತು.