ಬೆಳ್ತಂಗಡಿ, ಜು.29: ಧರ್ಮಸ್ಥಳ ಅರಣ್ಯದಲ್ಲಿ ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣ ಸಂಬಂಧ ಜುಲೈ 29 ರಂದು ದೂರುದಾರನ ಸಮ್ಮುಖದಲ್ಲಿ ಎಸ್.ಐ.ಟಿ ಅಧಿಕಾರಿಗಳು ಹಾಗೂ ಇತರ ಅಧಿಕಾರಿಗಳಿಂದ ಹೆಣಗಳ ಕಳೆಬರ ಹೊರತೆಗೆಯುವ ಕಾರ್ಯಾಚರಣೆಗೆ ಎಸ್.ಐ.ಟಿ. ತಂಡದದಿಗೆ ವೈದ್ಯರ ತಂಡ ಜತೆಯಾಗಿದೆ.
ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಅಧಿಕಾರಿಗಳು ಮುಂಜಾನೆಯೇ ಹಾಜರಾಗಿದ್ದರು. ಈ ವೇಳೆ ಮಂಗಳೂರು ಕೆಎಂಸಿ ಆಸ್ಪತ್ರೆಯ ಇಬ್ಬರು ನುರಿತ ವೈದ್ಯರಾದ ಡಾ.ಜಗದೀಶ್ ರಾವ್ ಮತ್ತು ಡಾ.ರಶ್ಮಿ ತಂಡ ಎಸ್.ಐ.ಟಿ ಆದೇಶದ ಮೇರೆಗೆ ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಆಗಮಿಸಿ ಸಭೆ ನಡೆದು ಬಳಿಕ ಸೋಮವಾರ ಸಾಕ್ಷಿ ಗುರುತಿಸಿ ನೇತ್ರಾವತಿ ಸ್ನಾನ ಘಟ್ಟದಲ್ಲಿರುವ ಮೊದಲ ಸ್ಥಳದಲ್ಲಿ ಇರುವ ಮೃತದೇಹದ ಅವಶೇಷ ಹೊರತೆಗೆಯುವ ಕಾರ್ಯಾಚರಣೆಗೆ ತಯಾರಿ ನಡೆಸಲಾಗುತ್ತಿದೆ.
ಎಸ್.ಐ.ಟಿ. ತನಿಖಾಧಿಕಾರಿ ಜಿತೇಂದ್ರ ದಯಾಮ, ಎಸ್ಪಿ ಸೈಮನ್, ಪುತ್ತೂರು ವಿಭಾಗ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಮ್ ಸಹಿತ ಕಂದಾಯ, ಅರಣ್ಯ, ಎಫ್.ಎಸ್.ಎಲ್.ನ ಸೋಕೋ ವಿಭಾಗ, ಎ.ಎನ್.ಎಫ್., ಆಂತರಿಕ ಭದ್ರತಾ ದಳ, ಪೊಲೀಸ್ ತಂಡದ ನೇತೃತ್ವದಲ್ಲಿ ಕಾರ್ಯಾಚರಣೆಗೆ ಅಣಿಯಾಗಿದ್ದಾರೆ.