ಬಂಟ್ವಾಳ:ಮೂರು ದಿನಗಳಿಂದ ನಾಪತ್ತೆಯಾಗಿದ್ದಾನೆ ಎನ್ನಲಾದ ಹೇಮಂತ್ ಗಾಗಿ ಶೋಧ ಕಾರ್ಯ ಮುಂದುವರಿದಿದೆ. ಕಡೇಶಿವಾಲಯ ನಿವಾಸಿ ಹೇಮಂತ್ ಆಚಾರ್ಯ( 21) ಎಂಬಾತ ಜುಲೈ 28 ರಂದು ಮನೆಯಿಂದ ಕೆಲಸಕ್ಕೆ ಹೋದವ ನಾಪತ್ತೆಯಾಗಿದ್ದರು.
ಹೇಮಂತ್ ಗೆ ಸೇರಿದ ದ್ವಿಚಕ್ರ ವಾಹನವೊಂದು ರಾಷ್ಟ್ರೀಯ ಹೆದ್ದಾರಿ ರಸ್ತೆಯ ಬಂಟ್ವಾಳದ ಜಕ್ರಿಬೆಟ್ಟು ಎಂಬಲ್ಲಿ ನೇತ್ರಾವತಿ ನದಿ ತೀರದಲ್ಲಿ ಅನಾಥವಾಗಿ ಸಿಕ್ಕಿತ್ತು. ಹಾಗಾಗಿ ಈತ ಇಲ್ಲಿಯೇ ನಾಪತ್ತೆಯಾಗಿರುವ ಬಗ್ಗೆ ಸಂಶಯಗೊಂಡ ಪೋಲೀಸ್ ಇಲಾಖೆ , ಅಗ್ನಿಶಾಮಕ ದಳದ ಸಿಬ್ಬಂದಿ ಮೂಲಕ ನದಿಯಲ್ಲಿ ಹಾಗೂ ಇತರ ಸ್ಥಳಗಳಲ್ಲಿ ಶೋಧ ನಡೆಸಿದೆ.
ತುಂಬೆ, ಸಜೀಪ, ಫರಂಗಿಪೇಟೆವರೆಗೆ ನೇತ್ರಾವತಿ ನದಿಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಆದರೆ ಇನ್ನೂ ಕೂಡ ಹೇಮಂತ್ ನ ಸುಳಿವು ಸಿಕ್ಕಿಲ್ಲ ಎಂದು ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ತಿಳಿಸಿದ್ದಾರೆ.