ನೆಲಮಂಗಲ: ಧರ್ಮಸ್ಥಳದಲ್ಲಿ ಎಸ್‌ಐಟಿ ತನಿಖೆ ವೇಳೆ ಪಾಯಿಂಟ್ ನಂ.1ನಲ್ಲಿ ಸಿಕ್ಕ ಡೆಬಿಟ್, ಪ್ಯಾನ್ ಕಾರ್ಡ್‌ನ ವಾರಸುದಾರರ ವಿಳಾಸ ಪತ್ತೆಯಾಗಿದೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ದಾಬಸ್‌ಪೇಟೆ ನಿವಾಸಿಯಾಗಿದ್ದ ಸುರೇಶ್ ಎಂಬಾತನದ್ದು ಅನ್ನೋದು ಗೊತ್ತಾಗಿದೆ.
ಗಂಗಮರಿಯಪ್ಪ ಹಾಗೂ ಸಿದ್ದಲಕ್ಷ್ಮಮ್ಮ ಎಂಬುವರ ಪುತ್ರ ಸುರೇಶ್ ಪರ್ಸ್‌ನಲ್ಲಿ ಎರಡು ಪ್ಯಾನ್ ಕಾರ್ಡ್‌ಗಳು ಪತ್ತೆಯಾಗಿತ್ತು. ಒಂದು ಸುರೇಶ್ ಎಂಬಾತನ ಪ್ಯಾನ್ ಕಾರ್ಡ್ , ಮತ್ತೊಂದು ಅವರ ತಾಯಿ ಸಿದ್ದಲಕ್ಷ್ಮಮ್ಮ ಅವರ ಪ್ಯಾನ್ ಕಾರ್ಡ್ ಎಂಬುದು ಬಹಿರಂಗವಾಗಿತ್ತು. 2 ವರ್ಷಗಳ ಹಿಂದೆ ಮನೆ ಬಿಟ್ಟು ತೆರಳಿದ್ದ ಸುರೇಶ್ ಆಗ ಧರ್ಮಸ್ಥಳಕ್ಕೆ ತೆರಳಿದ್ದ ಎನ್ನಲಾಗಿದೆ. ಮಾರ್ಚ್ ತಿಂಗಳಲ್ಲಿ ಜಾಂಡಿಸ್‌ನಿಂದಾಗಿ ಸುರೇಶ್ ಸಾವನ್ನಪ್ಪಿದ್ದರು. ಇನ್ನು ಸಿದ್ದಲಕ್ಷ್ಮಮ್ಮ ಬದುಕಿದ್ದಾರೆ. ಈ ಕುರಿತು ಸುರೇಶ್ ಕುಟುಂಬಸ್ಥರು ಪ್ರತಿಕ್ರಿಯೆ ನೀಡಿದ್ದಾರೆ.
ಮೃತ ಸುರೇಶ್ ಅಕ್ಕ ರೂಪಾ ಮಾತನಾಡಿ, ಸಾಕಷ್ಟು ಬಾರಿ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಆಗ ಧರ್ಮಸ್ಥಳದಲ್ಲಿ ಮಿಸ್ ಆಗಿರಬೇಕು. ನಮ್ಮ ತಾಯಿಯ ಎಟಿಎಂ ಕಾರ್ಡ್ ಕಳೆದು ಹೋಗಿದೆ ಎಂದು ಹೇಳಿದ್ದ. ಆಗ ನಮ್ಮ ತಾಯಿ ಹೊಸ ಎಟಿಎಂ ಕಾರ್ಡ್ ತೆಗೆದುಕೊಂಡಿದ್ದರು. ಸುರೇಶ್ 2 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ, 5 ತಿಂಗಳ ಹಿಂದೆ ಇಲ್ಲೇ ಮೃತಪಟ್ಟಿದ್ದರು. ಧರ್ಮಸ್ಥಳದ ವಿಚಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.
ಮೃತ ಸುರೇಶ್ ತಾಯಿ ಮಾತನಾಡಿ, ಅಲ್ಲಿ ಸಿಕ್ಕ ದಾಖಲೆಗಳು ನನ್ನದು ಹಾಗೂ ನನ್ನ ಮಗನದ್ದೇ, ಈ ಹಿಂದೆ ಧರ್ಮಸ್ಥಳಕ್ಕೆ ಹೋದಾಗ ಕಳೆದು ಹೋಗಿದೆ ಎಂದು ನನ್ನ ಮಗ ಸುರೇಶ್ ಹೇಳಿದ್ದ. ಸುರೇಶ್ ಅನಾರೋಗ್ಯದಿಂದ ಮೃತ ಪಟ್ಟಿದ್ದಾನೆ. ನನ್ನ ಎಟಿಎಂ ಕಾರ್ಡ್ ಸುರೇಶ್ ಬಳಿ ಇತ್ತು, ಅಲ್ಲಿ ಹೋದಾಗ ಕಳೆದು ಹೋಗಿದೆ. ನೆಲಮಂಗಲ ತಾಲೂಕಿನ ದಾಬಸ್ ಪೇಟೆಯಲ್ಲಿ ಅನಾರೋಗ್ಯದಿಂದ ಮೃತ ಪಟ್ಟಿದ್ದಾನೆ. ಧರ್ಮಸ್ಥಳ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲವೆಂದು ಹೇಳಿದ್ದಾರೆ.