ಮಂಗಳೂರು:ದಕ್ಷಿಣ ಕನ್ನಡ ಸೇರಿದಂತೆ ಕರ್ನಾಟಕದ ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್‌ವೈ) ಗೆ ನಿಗದಿಪಡಿಸಿರುವ ಮಾನದಂಡ / ಮಾರ್ಗಸೂಚಿಗಳಲ್ಲಿ ತಿದ್ದುಪಡಿ ತಂದು ಈ ಯೋಜನೆ ಅನುಷ್ಠಾನಕ್ಕೆ ಎದುರಾಗಿರುವ ಸವಾಲುಗಳನ್ನು ಬಗೆಹರಿಸುವಂತೆ ದ.ಕ ಸಂಸದ ಕ್ಯಾ|ಬ್ರಿಜೇಶ್ ಚೌಟ ಅವರು ಸಂಸತ್ತಿನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವಾಲಯವನ್ನು ಒತ್ತಾಯಿಸಿದ್ದಾರೆ.
ಗ್ರಾಮೀಣ ಭಾಗದ ರಸ್ತೆ ಸಂಪರ್ಕವನ್ನು ಲೋಕಸಭೆಯಲ್ಲಿ ನಿಯಮ 377ರಡಿ ಈ ಮಹತ್ವದ ವಿಷಯ ಪ್ರಸ್ತಾಪಿಸಿರುವ ಕ್ಯಾ|ಚೌಟ ಅವರು, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಹಂತ-1, ಹಂತ-2 ಹಾಗೂ ಹಂತ-3 ದೇಶದ ಸುಧಾರಿಸುವಲ್ಲಿ ಗಮನಾರ್ಹ ಪಾತ್ರ ವಹಿಸಿದೆ.
ಇದರ ಮುಂದಿನ ಹಂತದ ಪಿಎಂಜಿಎಸ್‌ವೈ -4 ಯೋಜನೆಯು ಉತ್ತಮ ಗುಣಮಟ್ಟದ ಮತ್ತು ಹವಾಮಾನ ವೈಪರೀತ್ಯ ಸವಾಲು ತಡೆದುಕೊಳ್ಳಬಲ್ಲ ರಸ್ತೆಗಳ ನಿರ್ಮಾಣದ ಮೇಲೆ ಕೇಂದ್ರೀಕರಿಸಿರುವುದು ಶ್ಲಾಘನೀಯ.
ಆದರೆ, ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಪಶ್ಚಿಮ ಘಟ್ಟಕ್ಕೆ ಹೊಂದಿಕೊಂಡಿರುವ ಜಿಲ್ಲೆ ಹಾಗೂ ಮಲೆನಾಡು ಜಿಲ್ಲೆಗಳ ಸ್ವರೂಪವು ಭೌಗೋಳಿಕವಾಗಿ ಸಾಕಷ್ಟು ಭಿನ್ನತೆ ಹೊಂದಿರುವುದರಿಂದ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯು ದಕ್ಷಿಣ ಕನ್ನಡದಂತ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವುದಕ್ಕೆ ವಾಸ್ತವಿಕ ನೆಲೆಯಲ್ಲಿ ಅದರ ಮಾರ್ಗಸೂಚಿ-ನಿಯಮಗಳಿಂದಾಗಿ ಸಾಕಷ್ಟು ಅಡ್ಡಿ ಎದುರಾಗಿದೆ.
ದಕ್ಷಿಣ ಕನ್ನಡದಂತಹ ಜಿಲ್ಲೆಗಳ ಭೌಗೋಳಿಕ ಪರಿಸ್ಥಿತಿ ಅರ್ಥಮಾಡಿಕೊಳ್ಳದೆ, ನಿರ್ವಹಣಾ ಮಾಹಿತಿ ವ್ಯವಸ್ಥೆ,ದತ್ತಾಂಶದ ಪ್ರಕಾರ ‘ಸಮತಟ್ಟಾದ ಪ್ರದೇಶ/ಬಯಲು ಪ್ರದೇಶ’ ಎಂದು ಪರಿಗಣಿಸಲಾಗಿದೆ.
ಜಿಲ್ಲೆಯ ಹಲವು ಹಳ್ಳಿಗಳಿಗೆ ರಸ್ತೆ ಸಂಪರ್ಕಗಳಿವೆ ಎಂದು ಗುರುತಿಸಲಾಗಿದ್ದರೂ, ವಾಸ್ತವದಲ್ಲಿ ಗುಡ್ಡಗಾಡು ಪ್ರದೇಶಗಳು, ದಟ್ಟ ಅರಣ್ಯಗಳು ಮತ್ತು ಭೂಕುಸಿತದ ಅಪಾಯದಿಂದಾಗಿ ಎಲ್ಲಾ ಋತುಗಳಿಗೂ ಯೋಗ್ಯವಾದ ರಸ್ತೆ ಸಂಪರ್ಕವಿರುವುದಿಲ್ಲ.ಹೀಗಾಗಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಿಎಂಜಿಎಸ್‌ವೈ-4 ಹಂತ ಅನುಷ್ಠಾನಕ್ಕೆ ನಾನಾ ರೀತಿಯ ತೊಂದರೆ ಎದುರಾಗುವ ಮೂಲಕ ಈ ಯೋಜನೆಯ ಅರ್ಹತೆಯನ್ನು ಸೀಮಿತಗೊಳಿಸಿದೆ ಎಂದು ಚೌಟ ಅವರು ಸದನದ ಗಮನ ಸೆಳೆದಿದ್ದಾರೆ.