ಸಾವಿರ ಎಸಲು ಒಂದು ದಾರದೊಳಗೆ ಸೇರಿ ರಕ್ಷೆ ರೂಪುಗೊಳ್ಳುವಂತೆ ನಾವೆಲ್ಲರೂ ಸಂಘಟಿತರಾಗಬೇಕು : ಗಿರಿಶಂಕರ ಸುಲಾಯ
ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರದ ಅರಿವು ಮೂಡಿಸುವ ಕಾರ್ಯ : ಜಗನ್ನಾಥ ಪೂಜಾರಿ ಮುಕ್ಕೂರು
ಮುಕ್ಕೂರು : ಸ್ವಾರ್ಥವನ್ನು ಬಿಟ್ಟು ಸಮಾಜದ ಪರ ಚಿಂತನೆ ಮಾಡಬೇಕು ಎನ್ನುವ ರಕ್ಷಾಬಂಧನ ಉತ್ಸವ ಸಹೋದರತೆಯ ಸಂಕೇತ. ಸಾವಿರ ಎಸಲು ಒಂದು ದಾರದೊಳಗೆ ಸೇರಿ ರಕ್ಷೆ ರೂಪುಗೊಳ್ಳುವಂತೆ ನಾವೆಲ್ಲರೂ ಸಂಘಟಿತರಾಗಿ ಒಂದಾಗಿ ಬದುಕಬೇಕು ಎನ್ನುವ ಅರ್ಥವೂ ಇದರ ಹಿಂದಿದೆ ಎಂದು ಧಾರ್ಮಿಕ ಉಪನ್ಯಾಸಕ, ನಿವೃತ್ತ ಶಿಕ್ಷಕ ಗಿರಿಶಂಕರ ಸುಲಾಯ ಹೇಳಿದರು.

ಶ್ರೀ ಉಳ್ಳಾಲ್ತಿ ಭಕ್ತವೃಂದ ಮುಕ್ಕೂರು ಇದರ ವತಿಯಿಂದ ಚಾಮುಂಡಿಮೂಲೆ ಅಭಯ ನಿವಾಸದಲ್ಲಿ ಆ.10 ರಂದು ನಡೆದ ರಕ್ಷಾ ಬಂಧನ ಆಚರಣೆಯಲ್ಲಿ ಸಂದೇಶ ನೀಡಿದರು.
ಅಣ್ಣ ತಂಗಿ ಬಾಂಧವ್ಯ ಕಡಿಮೆ ಆಗುತ್ತಿರುವ ಈ ಕಾಲ ಘಟ್ಟದಲ್ಲಿ ಅತ್ಯಾಚಾರ, ಅನಾಚಾರ ಹೆಚ್ಚಾಗುತ್ತಿದೆ. ಇದರ ಮಧ್ಯೆ ರಕ್ಷಾಬಂಧನ ಸಹೋದರತೆ, ಸಚ್ಛಾರಿತ್ರೆಯನ್ನು ನೆನಪಿಸುತ್ತಿದೆ. ಒಂದು ಹೆಣ್ಣು ಕಣ್ಣ ಮುಂದೆ ನಿಂತಾಗ ನಮ್ಮಲ್ಲಿ ತಾಯಿ, ಸಹೋದರಿಯ ಭಾವ ಬರಬೇಕು. ಅಣ್ಣನ ಸ್ಥಾನದಲ್ಲಿ ನಿಂತು ತಂಗಿಗೆ ರಕ್ಷಣೆ ನೀಡುವ ಭಾವನೆಯನ್ನು ರಕ್ಷಾಬಂಧನ ನೀಡುತ್ತದೆ. ಅದು ಜೀವನೊದ್ದಕ್ಕೂ ಪಾಲನೆ ಆಗಬೇಕು ಎಂದರು.

ನಾವೆಲ್ಲ ಹಿರಿಯರ ಕಥೆ ಕೇಳಿ ಬೆಳೆದವರು. ಶಾಲೆಯ ಮೆಟ್ಟಿಲನ್ನು ಹತ್ತದ ಅಜ್ಜ, ಅಜ್ಜಿಗೆ ರಾಮಾಯಣ, ಮಹಾಭಾರತ, ಭಗವದ್ಗೀತೆ ಗೊತ್ತಿತ್ತು. ಅದನ್ನು ಮಕ್ಕಳು, ಮೊಮ್ಮಕ್ಕಳು ಕೇಳುವ ರೀತಿಯಲ್ಲಿ ಹೇಳುವ ಕಲೆಗಾರಿಕೆ ಅವರಲ್ಲಿತ್ತು. ಆದರೆ ಇಂದಿನ ಮಕ್ಕಳಿಗೆ ಪುರಾಣದ ಕಥೆ ಹೇಳುವವರು ಇಲ್ಲ, ಹೇಳಿದರೆ ಕೇಳುವ ವ್ಯವಧಾನವೂ ಇಲ್ಲದ ಹೊತ್ತು. ಸಂಸ್ಕಾರ, ಸಂಸ್ಕೃತಿಗೆ ಪೂರಕ ಶಿಕ್ಷಣ ಇಲ್ಲದ ಸ್ಥಿತಿ ಇಂದಿನದು ಎಂದು ಸುಲಾಯ ಅವರು ವಿಶ್ಲೇಷಿಸಿದರು.
ನಾವು ದೇಶ ಮುಂದಿಟ್ಟು ಬದುಕಬೇಕು. ಭರತ ಸಮಾಜದಲ್ಲಿ ಎಲ್ಲರನ್ನು ಪ್ರೀತಿಸುವ, ಆದರಿಸುವ ಸಂಸ್ಕೃತಿ ನಮ್ಮದು. ಈ ಭಾವ ಇತ್ತೀಚಿನ ಪೀಳಿಗೆಯಲ್ಲಿ ಕ್ಷೀಣವಾಗುತ್ತಿದೆ. ಪರಸ್ಪರ ಮಾತುಕತೆ ಇಲ್ಲದೆ ಅಪರಿಚಿತರಾಗಿ ಬದುಕುವ ಹಂತಕ್ಕೆ ತಲುಪಿದ್ದೇವೆ ಎಂದ ಅವರು, ದಲಿತ ಸಮಾಜ ಅತ್ಯಂತ ಶ್ರೇಷ್ಟ ಸಮಾಜ. ಏಕೆಂದರೆ ಮಹಾನ್ ಗ್ರಂಥ ರಾಮಾಯಣ ಅನ್ನು ಬರೆದವರು ಬೇಡ ಸಮುದಾಯದ ವಾಲ್ಮೀಕಿ. ಹೀಗಾಗಿ ಎಲ್ಲ ಸಮುದಾಯವೂ ಸರ್ವ ಶ್ರೇಷ್ಠ ಎಂದು ಅವರು ವಿವರಿಸಿದರು.
ಸಂಘಟನೆಯ ಅವಲೋಕನ ಅಗತ್ಯ
ಊರಿನಲ್ಲಿ ಸಮರ್ಥ ಸಂಘಟನೆ ಇದ್ದರೆ ಆಗ ಊರು ಬಲಿಷ್ಠ ವಾಗಿರುತ್ತದೆ. ಒಂದು ವರ್ಷ ದಾಟಿ ಇನ್ನೊಂದು ವರ್ಷಕ್ಕೆ ಕಾಲಿಟ್ಟಾಗ ಸಂಘಟನೆಯ ಬೆಳವಣಿಗೆಯ ಬಗ್ಗೆ ಅವಲೋಕನ ಮಾಡಬೇಕು. ಸರಿ ತಪ್ಪು ಗಳ ಅರಿತು ಹೆಜ್ಜೆ ಇಡಬೇಕು ಎಂದು ಗಿರಿಶಂಕರ ಸುಲಾಯ ಹೇಳಿದರು.

ಸಭಾಧ್ಯಕ್ಷತೆ ವಹಿಸಿದ್ದ ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಉಳ್ಳಾಲ್ತಿ ಭಕ್ತವೃಂದ ದೇವಾಲಯಗಳಲ್ಲಿ ಕರಸೇವೆ ಮಾಡುವ ಮೂಲಕ ಹತ್ತೂರಿನಲ್ಲಿ ಗುರುತಿಸಿಕೊಂಡಿದೆ. ಈ ಬಾರಿ ರಕ್ಷಾಬಂಧನದ ಮೂಲಕ ಸಹೋದರತೆಯ ಸಂದೇಶವನ್ನು ಸಾರಿದೆ. ಮುಂದಿನ ದಿನಗಳಲ್ಲಿ ಸನಾತನ ಸಂಸ್ಕೃತಿಗೆ ಪೂರಕವಾದ ಹತ್ತಾರು ಚಟುವಟಿಕೆಗಳನ್ನು ಹಮ್ಮಿಕೊಂಡು ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರದ ಅರಿವು ಮೂಡಿಸುವ ಕಾರ್ಯ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ, ಸಾವಿತ್ರಿ ಚಾಮುಂಡಿಮೂಲೆ ಉಪಸ್ಥಿತರಿದ್ದರು. ಶ್ರೀ ಉಳ್ಳಾಲ್ತಿ ಭಕ್ತವೃಂದದ ಸದಸ್ಯ ಜಯಂತ ಗೌಡ ಕುಂಡಡ್ಕ ವಂದಿಸಿದರು. ಯಕ್ಷಿತಾ ಚಾಮುಂಡಿಮೂಲೆ ನಿರೂಪಿಸಿದರು.
ಪುಷ್ಪ ಸಮರ್ಪಣೆ
ರಾಖಿ ಕಟ್ಟಿ ಶುಭಾಷಯ
ಆರಂಭದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಅನಂತರ ಪರಸ್ಪರ ರಕ್ಷೆ ಕಟ್ಟಿ ರಕ್ಷಾಬಂಧನ ಆಚರಿಸಲಾಯಿತು.