ಬೆಳ್ತಂಗಡಿ: ಧರ್ಮಸ್ಥಳ ಕುರಿತು ನಡೆಯುತ್ತಿರುವ ಅಪಪ್ರಚಾರ ಖಂಡಿಸಿ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ಶನಿವಾರ ‘ಧರ್ಮಸ್ಥಳ ಚಲೋ’ ಅಭಿಯಾನ ಆರಂಭಗೊಂಡಿದೆ.
ಬೆಂಗಳೂರಿನ ನೆಲಮಂಗಲ ಟೊಲ್ ಮೂಲಕ ಸುಮಾರು 400ಕ್ಕೂ ಹೆಚ್ಚು ವಾಹನಗಳಲ್ಲಿ ಯಲಹಂಕ ಕ್ಷೇತ್ರದ ಭಕ್ತರೊಂದಿಗೆ ವಿಶ್ವನಾಥ್ ಅವರು ಶ್ರೀಕ್ಷೇತ್ರಕ್ಕೆ ಬಂದಿದ್ದಾರೆ.
ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನ ಮತ್ತು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ವಿರುದ್ಧ ಕೆಲವು ಯೂಟ್ಯೂಬರ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿಗಳು ನಡೆಸುತ್ತಿರುವ ಪಿತೂರಿ ಖಂಡಿಸಿ ಬೃಹತ್ ಯಾತ್ರೆ ಕೈಗೊಂಡಿದ್ದು ಒಂದು ವಾರದಿಂದ ಸಿದ್ಧತೆ ನಡೆಸಲಾಗಿದೆ.
ಧರ್ಮಸ್ಥಳದ ಮಂಜುನಾಥನ ವಿಶೇಷ ದರ್ಶನ ಪಡೆದು ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎಂಬ ಬೇಡಿಕೆಯೊಂದಿಗೆ ಸಂಕಲ್ಪ ಮಾಡಲಿದ್ದಾರೆ. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡಿಸಿ ಧರ್ಮಸ್ಥಳಕ್ಕೆ ಬಂದಿದ್ದೇವೆ. ಮಂಜುನಾಥ ಸ್ವಾಮಿ ದರ್ಶನ ಪಡೆದು ಸಂಕಲ್ಪ ಮಾಡುತ್ತೇವೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಸಂಕಲ್ಪ ಮಾಡುತ್ತೇವೆ ಎಂದು ವಿಶ್ವನಾಥ್ ತಿಳಿಸಿದ್ದಾರೆ.