ವಿಟ್ಲ : ಕೂಟೇಲು ಶ್ರೀಕೃಷ್ಣ ಯುವಕ ಸಂಘ ಹಾಗೂ ಬಿಜೆಪಿ ಅಡ್ಯನಡ್ಕದ ನೇತೃತ್ವದಲ್ಲಿ ಕೂಟೇಲು-ಮುಳಿಯಾಲ- ಸಾಯ ಪರಿಸರದ ಕಾರ್ಯಕರ್ತರಿಂದ ಜೂ.20 ರಂದು ಶ್ರಮದಾನ ನಡೆಯಿತು.
ಮರಕ್ಕಿಣಿಯಿಂದ ಪಕಳಕುಂಜ ಮಾಣಿಲಕ್ಕೆ ಸಂಪರ್ಕ ಕಲ್ಪಿಸುವ ಮುಳಿಯಾಲ – ಸಾಯ ರಸ್ತೆಯಲ್ಲಿ ಸುಗಮ ಸಂಚಾರಕ್ಕಾಗಿ ರಸ್ತೆಯ ಬದಿಯಲ್ಲಿ ಬೆಳೆದಿರುವ ಕಾಡುಪೊದೆಗಳನ್ನು ಕಡಿಯುವುದು ಹಾಗೂ ಮಳೆನೀರು ಹರಿದುಹೋಗಲು ಚರಂಡಿ ದುರಸ್ತಿಗಾಗಿ ಕೋವಿಡ್ ನಿಯಮಗಳು ಪಾಲನೆಯೊಂದಿಗೆ ಶ್ರಮದಾನ ನಡೆಸಲಾಗುತ್ತಿದ್ದು, ಇಂದು ನಡೆದ 2ನೇ ಶ್ರಮದಾನದಲ್ಲಿ ಊರಿನ ಹಿರಿಯರ ಸಹಿತ 20 ಕ್ಕೂ ಅಧಿಕ ಕಾರ್ಯಕರ್ತರು ಪಾಲ್ಗೊಂಡರು.
ಕೂಟೇಲು ಅಂಗನವಾಡಿಯ ಬಳಿಯಿಂದ ಮುಳಿಯಾಲದ ತನಕ ಶ್ರಮದಾನ ನಡೆಸಲಾಯಿತು. ಉದಯ ಭಟ್ ಮುಳಿಯಾಲ ಹಾಗೂ ನಾರಾಯಣಪ್ರಸಾದ್ ಕೂಟೇಲು ಇವರು ಹುಲ್ಲು ಕತ್ತರಿಸುವ ಯಂತ್ರದ ಸಹಕಾರ ನೀಡಿದರು. ಬಿಜೆಪಿ ಸಾಯ ಬೂತ್ ಅಧ್ಯಕ್ಷರಾದ ನಾರಾಯಣ ಪ್ರಸಾದ್ ಕೂಟೇಲು ಇಂದಿನ ಊಟ-ಉಪಾಹಾರಗಳಿಗೆ ಸಾಮಗ್ರಿಯನ್ನೊದಗಿಸಿದರು. ಕೃಷ್ಣ ನಾಯ್ಕ ಕೂಟೇಲು ಹಾಗೂ ಮನೆಯವರು ಊಟೋಪಹಾರಗಳನ್ನು ತಯಾರಿಸಿ ಸಹಕರಿಸಿದ್ದು,ರಿಕ್ಷಾ ಚಾಲಕ-ಮಾಲಕರು ಸಂಚಾರ-ಸಾಗಾಟದಲ್ಲಿ ಸಹಕರಿಸಿದರು.
ಸಾಯ ವಾರ್ಡ್ ಸದಸ್ಯರಾದ ಮಹೇಶ್ ಭಟ್ ಕೂರ್ಲುಗಯ ಹಾಗೂ ರಾ.ಸ್ವ.ಸೇ. ಸಂಘದ ತಾಲೂಕು ಕಾರ್ಯವಾಹರಾದ ಕೃಷ್ಣರಾಜ್ ಪೆರ್ಲ ಇವರು ಆಗಮಿಸಿ ಸೂಕ್ತ ಸಲಹೆ-ಮಾರ್ಗದರ್ಶನಗಳನ್ನು ನೀಡಿ ಕಾರ್ಯಕರ್ತರನ್ನು ಪ್ರೋತ್ಸಾಹಿಸಿದರು.