ಪುತ್ತೂರು : ತಾಲೂಕಿನ ಅತಿ ಪ್ರಾಚೀನ ಗಣೇಶೋತ್ಸವ ಎಂಬ ಹೆಗ್ಗಳಿಕೆ ಹೊಂದಿರುವ ಪುತ್ತೂರು ಕಿಲ್ಲೆ ಮೈದಾನದ 68ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಮಹಾಗಣಪತಿಗೆ ಈ ಬಾರಿ ಸ್ವರ್ಣಲೇಪಿತ ಸೊಂಡಿಲು ಮತ್ತು ಕರ್ಣದ್ವಯಗಳ ಸಮರ್ಪಣೆಯಾಗಲಿವೆ.
ಪುತ್ತೂರು ಆಸುಪಾಸಿನ ಸಾರ್ವಜನಿಕ ಶ್ರೀ ಗಣೇಶೋತ್ಸವಗಳಲ್ಲಿ ಕಿಲ್ಲೆ ಮೈದಾನದ ಚೌತಿಗೆ ವಿಶೇಷ ಮಹತ್ವವಿದೆ. 7 ದಿನ ನಿರಂತರ ಅನ್ನಸಂತರ್ಪಣೆ ನಡೆಯುವ ಮಂಟಪ ಇದಾಗಿದ್ದು, ಇಲ್ಲಿನ ಚೌತಿಯಲ್ಲಿ ದೇವರಿಗೆ ದರ್ಶನ ಬಲಿ, ಮಹಾಗಣಪತಿ ಹೋಮ, ತುಲಾಭಾರ ಸೇವೆ ನಡೆಯುತ್ತದೆ. ಶೋಭಾಯಾತ್ರೆ ಹೊರಡುವ ಮೊದಲು ದೈವಗಳ ನೇಮ ನಡೆಯುವ ಗಣೇಶೋತ್ಸವ ಇದಾಗಿದೆ.
ಗಣೇಶ ಮೂರ್ತಿಗೆ ಬೆಳ್ಳಿಯ ಸೊಂಡಿಲು, ಕಿರೀಟ, ಕಿವಿ ಆಭರಣಗಳನ್ನು ದಿ.ಸುಧಾಕರ ಶೆಟ್ಟಿ ಅಧ್ಯಕ್ಷತೆ ಅವಧಿಯಲ್ಲೇ ಮಾಡಿಸಲಾಗಿತ್ತು. ಪ್ರಸ್ತುತ ಅವರ ಪುತ್ರ ಅಭಿಜಿತ್ ಶೆಟ್ಟಿ ದೇವತಾ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹತ್ತಾರು ವರ್ಷಗಳಿಂದ ದೇವರಿಗೆ ಹರಕೆ ರೂಪದಲ್ಲಿ ಬಂದಿದ್ದ ಚಿನ್ನದ ಹೂ ಮತ್ತಿತರ ಸೊತ್ತುಗಳನ್ನು ಕರಗಿಸಿ ನಾನಾ ವಿನ್ಯಾಸಗಳಲ್ಲಿ ಮರು ಸೃಷ್ಟಿ ಮಾಡಿ ಬೆಳ್ಳಿಯ ಕಿರೀಟ, ಸೊಂಡಿಲು ಮತ್ತು ಕಿವಿಗಳಿಗೆ ಜೋಡಿಸಲಾಗಿದೆ.
ದೇವರಿಗೆ ಅರ್ಪಣೆಯಾಗಿರುವ ಚಿನ್ನದ ಸರ ಮತ್ತಿತರ ದೊಡ್ಡ ಗಾತ್ರದ ಆಭರಣಗಳನ್ನು ಯಥಾಪ್ರಕಾರ ಉಳಿಸಿಕೊಳ್ಳಲಾಗಿದೆ. ಸಣ್ಣ ಪುಟ್ಟ ವಸ್ತುಗಳನ್ನಷ್ಟೇ ಬಳಸಿಕೊಂಡು ದೇವರ ಕಿರೀಟ, ಸೊಂಡಿಲ ಕವಚ, ಕಿವಿ ಕವಚಕ್ಕೆ ಸ್ವರ್ಣ ಲೇಪನ ಮಾಡಲಾಗಿದೆ.