ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ವಿರುದ್ಧ ಕಪೋಲಕಲ್ಪಿತ ಘಟನೆ ಸೃಷ್ಟಿಸಿ ಕ್ಷೇತ್ರದ ಪಾವಿರ್ತತೆಯನ್ನು ಹಾಳು ಮಾಡುವ ಹುನ್ನಾರದ ವಿರುದ್ಧ ಪುತ್ತೂರಿನಲ್ಲಿ ಜನಾಗ್ರಹ ಸಮಾವೇಶ ನಡೆಸುವುದಾಗಿ ಆ.24 ರಂದು ಪುತ್ತೂರು ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಅನ್ನಛತ್ರದಲ್ಲಿ ನಡೆದ ಭಕ್ತರ ತುರ್ತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಪುತ್ತೂರು ತಾಲೂಕಿನಲ್ಲಿ ನಡೆಯಲಿರುವ ಸಮಾವೇಶದ ಉಸ್ತುವಾರಿ ವಹಿಸಿಕೊಂಡಿರುವ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು ಸೆ.1 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ಭಾಗದಲ್ಲಿ ಹಾಕಿರುವ ಗಣೇಶೋತ್ಸವ ಸಮಿತಿ ಚಪ್ಪರದಲ್ಲಿ ಸಮಾವೇಶ ನಡೆಯಲಿದೆ.
ಧರ್ಮಕ್ಕೆ ಬಂದ ಚ್ಯುತಿಯನ್ನು ಹೋಗಲಾಡಿಸಬೇಕು:
ಪುತ್ತೂರು ತಾಲೂಕಿನಲ್ಲಿ ನಡೆಯಲಿರುವ ಸಮಾವೇಶದ ಉಸ್ತುವಾರಿ, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿರುವ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಮಾತನಾಡಿ ಕೆಲವು ವರ್ಷಗಳಿಂದ ಮತ್ತು ಮೂರು ನಾಲ್ಕು ತಿಂಗಳಿ0ದ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ನಡೆಯುತ್ತಿರುವ ಕುರಿತ ವಿಚಾರವನ್ನು ಗಂಭೀರವಾಗಿ ಗಣನೆಗೆ ತೆಗೆದು ಕೊಂಡು ಗುರುವಾರ ಮೋಹನ್ ಆಳ್ವರ ನೇತೃತ್ವದಲ್ಲಿ ಎರಡು ಜಿಲ್ಲೆಯಿಂದ ಸುಮಾರು 100 ಮಂದಿ ಪ್ರಮುಖರು ಧರ್ಮಸ್ಥಳದಲ್ಲಿ ಸೇರಿದ್ದೆವು. ಮಾಜಿ ಸಂಸದ ನಳಿನ್ ಕುಮಾರ್, ಪದ್ಮನಾಭ ಶೆಟ್ಟಿ, ಲೋಕೇಶ್ ಹೆಗ್ಡೆ, ಮಹಾಬಲ ರೈ ವಳತ್ತಡ್ಕ ಸಹಿತ ಹಲವಾರು ಮಂದಿ ಖಾವಂದರಲ್ಲಿ ಮಾತನಾಡಿದ್ದೇವೆ. ಶ್ರೀ ಕ್ಷೇತ್ರ ಎಲ್ಲಾ ಕ್ಷೇತ್ರದಲ್ಲೂ ಸಹಕಾರ ನೀಡುತ್ತಿದೆ. ಶೈಕ್ಷಣಿಕವಾಗಿ, ಕಟ್ಟಡದ ಕೊರತೆ, ದುರಸ್ಥಿ ಸಹಿತ ಸರಕಾರ ಮಾಡುವ ಅಭಿವೃದ್ಧಿ ಕೆಲಸಕ್ಕಿಂತಲೂ ಹೆಚ್ಚು ಕೆಲಸ ಹೆಗ್ಡೆಯವರು ಮಾಡಿದ್ದಾರೆ. ಹಳ್ಳಿಯ ಅಭಿವೃದ್ದಿಗೆ ಮೂಲ ಕಾರಣರಾಗಿದ್ದಾರೆ. ಇಷ್ಟಿದ್ದರೂ ನಾವೆಲ್ಲ ಏನು ಪ್ರತಿಕ್ರಿಯೆ ತೋರಿಲ್ಲ. ಈ ನಿಟ್ಟಿನಲ್ಲಿ ತಾಲೂಕು ಕೇಂದ್ರದಲ್ಲಿ ಸಮಾವೇಶ ಮಾಡಿ ಬಲ ನೀಡುವ ಕೆಲಸ ಮಾಡಬೇಕಾದ ಜವಾಬ್ದಾರಿಯ ನಿರ್ಣಯವನ್ನು ಆ ಸಭೆಯಲ್ಲಿ ಕೈಗೊಳ್ಳಲಾಯಿತು. ಇವತ್ತು ಸುಮಾರು 250ಕ್ಕೂ ಹೆಚ್ಚು ಜನರು ಕೇವಲ ಪೋನ್ ಕರೆಗೆ ಬಂದಿದ್ದಾರೆ. ಮುಂದೆ ಸಮಾವೇಶಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದರು.
ನಾವು ಸತ್ಯವನ್ನು ಸಮಾಜಕ್ಕೆ ತಿಳಿಸಬೇಕು:
ಕೇಂದ್ರ ಸಮಿತಿಯಿಂದ ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿಯ ಜವಾಬ್ದಾರಿ ಹೊತ್ತಿರುವ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ ಇವತ್ತು ಸುಳ್ಳು ಮೆರವಣಿಗೆ ಮಾಡಿ ಮುಗಿಸಿದೆ. ಸತ್ಯ ಹೊಸ್ತಿಲನ್ನು ದಾಟಿದೆ. ನಮ್ಮ ಹೋರಾಟಕ್ಕಿಂತ ಹೆಚ್ಚು ಸಮಾವೇಶವು ಜಾಗೃತ ಸಮಾಜಕ್ಕೆ ತಲುಪಬೇಕು. ವಾಸ್ತವ ಅಂಶಗಳನ್ನು ಜನರಿಗೆ ತಿಳಿಸುವ ಕೆಲಸ ಆಗಬೇಕು. ಇವತ್ತು ಧರ್ಮಸ್ಥಳವು ಶ್ರದ್ಧಾ ಕೇಂದ್ರದಲ್ಲಿ ಪೂಜೆ ಮಾಡಿ ಇರಬಹುದಿತ್ತು. ಆದರೆ ಅವರು ಜನಜಾಗೃತಿ ಶಿಬಿರ ಮಾಡುವ ಮೂಲಕ ರಾಜ್ಯ ಸರಕಾರಕ್ಕೆ ಮೂಲ ಪ್ರೇರೆಣೆಯಾದರು. ಹಳ್ಳಿಯ ದೇವಸ್ಥಾನಕ್ಕೆ ಅನುದಾನ ನೀಡುವ ಮೂಲಕ ಮಹತ್ವದ ಕಾರ್ಯ ಮಾಡಿದರು. ಧರ್ಮಕ್ಷೇತ್ರಗಳ ಪುನರುತ್ಥಾನ, ಶೈಕ್ಷಣಿಕ ಸಂಸ್ಥೆಗಳಿಗೂ ಸಹಕಾರ. ಮಹಿಳೆಯರಿಗೆ ಸ್ವಾಭಿಮಾನದ ಬದಕು ಕಟ್ಟಿಕೊಡುವುದು. ಸರಕಾರ ಏನೆನು ಮಾಡಬಹುದಾ ಅದನ್ನು ಧರ್ಮಸ್ಥಳ ಮಾಡಿದೆ. ಇದು ವಿರೇಂದ್ರ ಹೆಗ್ಡೆಯವರ ಹೆಮ್ಮೆಯಲ್ಲ. ಇಡಿ ಹಿಂದು ಸಮಾಜಕ್ಕೆ ಹೆಮ್ಮೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ದೇವಿ ಗುಡಿಯ ಪೂರ್ಣ ಖರ್ಚನ್ನು ಧರ್ಮಸ್ಥಳ ಮಾಡಿದೆ. ಇಷ್ಟೆಲ್ಲಾ ಸಮಾಜಮುಖಿ ಕಾರ್ಯ ಮಾಡುತ್ತಿರುವ ಧರ್ಮಸ್ಥಳ ಕ್ಷೇತ್ರದ ಮೇಲೆ ನಡೆಯುತ್ತಿರುವ ಷಡ್ಯಂತ್ರ ನಾಳೆ ಪುತ್ತೂರು, ನಾಳಿದ್ದು ಕಟೀಲಿಗೆ ಬರಬಹುದು. ಈ ನಿಟ್ಟಿನಲ್ಲಿ ನಾವು ಸತ್ಯವನ್ನು ಸಮಾಜಕ್ಕೆ ತಿಳಿಸಬೇಕು. ಇವತ್ತು ಸುಳ್ಳಿನ ಪ್ರಚಾರ ಬೇಗ ಆಗುತ್ತದೆ. ಹಾಗಾಗಿ ಮಂಜುನಾಥ, ಅಣ್ಣಪ್ಪ ಎದ್ದು ನಿಂತಿದ್ದಾನೆ. ಸತ್ಯವನ್ನು ತಿಳಿಸುವ ಕಾರ್ಯ ಆಗಬೇಕು. ಜನರ ಮನಸ್ಸನ್ನು ಕಡೆಸುತ್ತಿರುವ ಆ ಕೆಟ್ಟ ಮನಸ್ಸುಗಳನ್ನು ಸರಿ ದಾರಿಗೆ ತರಬೇಕು. ಈ ನಡುವೆ ಸೌಜನ್ಯನಿಗೆ ನ್ಯಾಯ ಸಿಗಲೇ ಬೇಕು. ಅದು ಮಾರ್ಗದ ಮದ್ಯದಲ್ಲಿ ಅಲ್ಲ. ಎಸ್‌ಐಟಿ ತನಿಕೆ ಆಗುತ್ತಿದೆ. ಇನ್ನೂ ನ್ಯಾಯಲಯದಲ್ಲೂ ವಿಚಾರಣೆ ಮಾಡಬಹುದು. ಆದರೆ ಇದರ ನಡುವೆ ಬುರುಡೆ ಎಲ್ಲಿಂದ ಬಂತು. ಅನನ್ಯ ಎಲ್ಲಿ ಸೃಷ್ಟಿ ಆಯಿತು. ಕಟ್ಟು ಕಥೆಯಿಂದ ಕ್ಷೇತ್ರಕ್ಕೆ ಹೇಗೆ ಹೊಡೆತ ಬಂದಿದೆಯೋ ಈ ಕುರಿತು ಸತ್ಯ ಜನರಿಗೆ ತಿಳಿಸಬೇಕಾಗಿದೆ ಎಂದರು.
ನಾವು ಒಟ್ಟಾಗಿ ಹೋರಾಟ ಮಾಡೋಣ:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ ಕ್ಷೇತ್ರದ ವಿರುದ್ಧ ದೊಡ್ಡ ಸಂಚಿನ ಹೋರಾಟ ನಡೆದಿದೆ. ಇದು ಇಡಿಯ ಹಿಂದು ಧರ್ಮದ ಕ್ಷೇತ್ರಕ್ಕೆ ಬರುವ ಸಾಧ್ಯತೆ ಇದೆ. ಇದನ್ನು ತಡೆಗಟ್ಟಲು ದೇವಳದ ಸಂವರ್ಧನ ಸಮಿತಿ ಮಾಡಲಾಗಿದೆ. ಜನರ ಸೇವೆ, ಆದ್ಯಾತ್ಮಿಕ ಕೇಂದ್ರ ತೋರಿಕೊಟ್ಟವರು ಪೂಜ್ಯ ಕಾವಂದರು. ಆ ಕ್ಷೇತ್ರಕ್ಕೆ ಅಪಪ್ರಚಾರ ಸರಿಯಲ್ಲ. ನಾವು ಒಟ್ಟಾಗಿ ಹೋರಾಟ ಮಾಡೋಣ ಎಂದರು.
ಅಪಪ್ರಚಾರ ಮನೆಬಾಗಿಲಿಗೆ ಬರುವ ಮುಂದೆ ಎಚ್ಚೆತ್ತುಕೊಳ್ಳಬೇಕು:
ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಕೆಲವು ವರ್ಷದ ಹಿಂದೆ ತಿರುಪತಿ, ಶಬರಿಮಲೆ ಕ್ಷೇತ್ರಗಳಿಗೆ ಇವತ್ತು ಧರ್ಮಸ್ಥಳ ಕ್ಷೇತ್ರದ ಮೇಲೆ ಅಪಪ್ರಚಾರ ಬಂದಿದೆ. ನಾವು ಸುಮ್ಮನಿದ್ದರೆ ನಾಳೆ ಮನೆ ಬಾಗಿಲಿಗೆ ಅಪಪ್ರಚಾರ ಸಾಧ್ಯ. ಅದಕ್ಕೆ ಮೊದಲು ನಾವು ಎಚ್ಚೆತ್ತು ಕೊಳ್ಳಬೇಕು. ಶ್ರದ್ದಾ ಬಿಂದುಗಳನ್ನು ಪ್ರಶ್ನೆ ಮಾಡದ ರೀತಿಯಲ್ಲಿ ನಾವು ಒಗ್ಗಟ್ಟಾಗಬೇಕಾಗಿದೆ. ಭಜನಾ ಮಂದಿರದ ಮುಖ್ಯಸ್ಥರು, ದೈವಸ್ಥಾನ, ತರವಾಡು ಮನೆತನ ಎಲ್ಲರನ್ನು ಒಟ್ಟು ಸೇರಿಸಿ ಪ್ರತಿಭಟನೆ ರೂಪದಲ್ಲಿ ಮತಾಂತರಿಗೆ ಎಚ್ಚರಿಕೆ ನಿಡುವ ಕೆಲಸ ಆಗಬೇಕು ಎಂದರು.
ನಾವು ಹೆಗ್ಡೆಯವರೊಂದಿಗಿದ್ದೇವೆ ಎಂಬ ಸಂದೇಶ ಕೊಡಬೇಕಾಗಿದೆ:
ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು ಅವರು ಮಾತನಾಡಿ ಯಾವ ಸರಕಾರ ಮಾಡದ ಕೆಲಸವನ್ನು ಕಾವಂದರು ಮಾಡಿದ್ದಾರೆ. ಅದರಲ್ಲೂ ಪುತ್ತೂರಿಗೆ ಹೆಚ್ಚಿನ ಅವಕಾಶ ನೀಡಿದ್ದಾರೆ. ನಾವು ಹೆಗ್ಡೆಯವರೊಂದಿಗೆ ಇದ್ದೇವೆ ಎಂಬ ಸಂದೇಶ ಕೊಡಬೇಕಾಗಿದೆ ಎಂದರು.
ದ್ರೋಹದ ವಿರುದ್ಧ ಪ್ರತಿರೋಧ ಮಾಡದಿದ್ದರೆ ನಾವು ಪಾಪಿಗಳಾಗುತ್ತೇವೆ:
ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿ ಹಿಂದುಗಳು ನಂಬಿಕೆ ಆಧಾರದಲ್ಲಿ ಬದುಕುವವರು. ಆದರೆ ನಂಬಿಕೆಗಳ ಮೇಲೆ ದ್ರೋಹ ನಡೆದಾಗ ನಾವು ಪ್ರತಿರೋಧ ಮಾಡದಿದ್ದರೆ ನಾವು ಕೂಡ ಪಾಪಿಗಳಾಗುತ್ತೇವೆ. ನಾವೆಲ್ಲ ಒಂದಾಗಿ ಪಕ್ಷ ಬೇದ ಮರೆತು ಧರ್ಮಸ್ಥಳದ ವಿಚಾರದಲ್ಲಿ ಕೊನೆಯ ತನಕ ಕಾಣಿಸಬೇಕು. ಈ ಷಡ್ಯಂತ್ರಕ್ಕೆ ಎನ್‌ಐಎ ತನಿಖೆಗೆ ನಾವು ಆಗ್ರಹಿಸಬೇಕು. ಕ್ಷೇತ್ರಕ್ಕೆ ಆದ ಅವಮಾನ ನಮಗೆ ಅದ ಅವಮಾನದಂತೆ. ಈ ನಿಟ್ಟಿನಲ್ಲಿ ಪುತ್ತೂರಿನಲ್ಲಿ ನಡೆಯುವ ಸಮಾವೇಶ ವಿರೋಧಿಗಳಿಗೆ ಉತ್ತರ ನೀಡುವಂತಿರಬೇಕೆOದರು.
ಧಾರ್ಮಿಕ ಕ್ಷೇತ್ರಕ್ಕೂ ಧಕ್ಕೆ ಬಂದಾಗ ಒಟ್ಟಾಗಿ ಹೋರಾಟ ಮಾಡೋಣ:
ಶ್ರೀ ಕ್ಷೇತ್ರ ಧರ್ಮಸ್ಥಳದ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿಯವರು ಮಾತನಾಡಿ ಅಪಪ್ರಚಾರ ಷಡ್ಯಂತ್ರಕ್ಕೆ ಅಂತ್ಯ ಹಾಡಬೇಕು. ಹಲವು ವರ್ಷಗಳಿಂದ ಧರ್ಮಸ್ಥಳದ ವಿರುದ್ಧ ಸುಳ್ಳು ಅಪಪ್ರಚಾರ ನಡೆಯುತ್ತಿದೆ. ಇದು ಎಸ್‌ಐಟಿ ತನಿಖೆಯಿಂದ ಅಂತ್ಯ ಆಗಬೇಕು. ಧರ್ಮಸ್ಥಳ ಕ್ಷೇತ್ರ ಮಾತ್ರವಲ್ಲ ಯಾವುದೇ ಧಾರ್ಮಿಕ ಕ್ಷೇತ್ರಕ್ಕೂ ಧಕ್ಕೆ ಬಂದಾಗ ಒಟ್ಟಾಗಿ ಹೋರಾಟ ಮಾಡೋಣ ಎಂದರು.
ರಾಜ್ಯವೇ ಪುತ್ತೂರನ್ನು ನೋಡುವ ಕೆಲಸ ಭಕ್ತರಿಂದ ಆಗಬೇಕು:
ಮಹತೋಭಾರ ಶ್ರೀ ಮಹಾಲಿಂಗೇಶ್ವವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಮಾತನಾಡಿ ಯಾವ ಪಕ್ಷ ನೋಡದೆ ನೀವೆಲ್ಲ ಮಹಾಲಿಂಗೇಶ್ವರ ದೇವರ ಭಕ್ತರಾಗಿ ಧರ್ಮಸ್ಥಳದ ಅಭಿಮಾನಿಯಾಗಿ ಸೇರಿರುವುದು ಸಂತೋಷ. ಎಷ್ಟೋ ಮಂದಿ ಇಲ್ಲಿ ಕಾರ್ಯಕ್ರಮ ಕೊಟ್ಟಿರಬಹುದು. ಎಷ್ಟೋ ಪಕ್ಷಗಳು ಕೊಟ್ಟಿರಬಹುದು. ಅವರು ಯಾರೆ ಬರಲಿ ನಮ್ಮ ಸಮಿತಿ ಅವರನ್ನು ಮಹಾಲಿಂಗೇಶ್ವರ ದೇವರ ಭಕ್ತರನ್ನಾಗಿ ಕಾಣುತ್ತೇವೆ. ನಾಳಿದಿನ ಸಮಾವೇಶಕ್ಕೆ ಏನು ಬೇಕೋ ಅದನ್ನು ಕೊಡುವ ಸಹಕಾರ ನೀಡುತ್ತೇವೆ. ಧರ್ಮಸ್ಥಳದ ವಿಚಾರದಲ್ಲಿ ಅಪಮಾನ ಮಾಡುವುದು ನಿಲ್ಲಬೇಕು. ಅದಕ್ಕೆ ಎಸ್‌ಐಟಿ. ತನಿಖೆ ಆಗಬೇಕು. ಸೌಜನ್ಯನನಿಗೆ ನ್ಯಾಯ ಸಿಗಬೇಕು. ಸಹಸ್ರ ಸಂಖ್ಯೆಯಲ್ಲಿ ನಾಳಿದಿನ ಸಮಾವೇಶದಲ್ಲಿ ಸೇರಿ ಇಡಿ ರಾಜ್ಯವೇ ಪುತ್ತೂರಿನತ್ತ ನೋಡುವಂತ ಕೆಲಸ ಕಾರ್ಯ ನಮ್ಮಂತ ಭಕ್ತರಿಂದ ಆಗಬೇಕೆಂದು ಹೇಳಿದರು.
ಪುತ್ತೂರಿಗೆ ಧರ್ಮಸ್ಥಳಕ್ಕೆ ವಿಶೇಷ ಸಂಬOಧ:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯ ಅವರು ಮಾತನಾಡಿ ಪುತ್ತೂರಿಗೆ ಮತ್ತು ಧರ್ಮಸ್ಥಳಕ್ಕೆ ವಿಶೇಷ ಸಂಬOಧವಿದೆ. ಯಾಕೆಂದರೆ ದೇವಳದ ಜೀರ್ಣೋದ್ಧಾರ ಸಂದರ್ಭ ದೇವಿಗುಡಿಯ ಪೂರ್ಣ ಮೊತ್ತವನ್ನು ಧರ್ಮಸ್ಥಳದ ವೀರೇಂದ್ರ ಹೆಗ್ಡೆಯವರು ಭರಿಸಿದ್ದರು. ಅಂತವರಿಗೆ ಇವತ್ತು ಅಪಪ್ರಚಾರ ಮಾಡುವುದು ಸರಿಯಲ್ಲ. ಹಿಂದು ಧರ್ಮಕ್ಕೆ ಅಪಪ್ರಚಾರ ಆಗುವ ಸಂದರ್ಭ ನಾವೆಲ್ಲ ಜೊತೆಯಲ್ಲಿರಬೇಕು. ನಾಳಿದಿನ ಕಾರ್ಯಕ್ರಮಕ್ಕೆ ಸಣ್ಣ ಕರ ಪತ್ರದ ಅಗತ್ಯವಿದೆ. ಸುಮಾರು 15ಸಾವಿರ ಜನಸಂಖ್ಯೆ ಸೇರುವ ನಿರೀಕ್ಷೆ ಇಟ್ಟುಕೊಳ್ಳೋಣ ಎಂದರು.
ಧಾರ್ಮಿಕ ಬಂಬಿಕೆಗೆ ಚ್ಯುತಿ ಬಂದಾಗ ನಾವೆಲ್ಲ ಒಗ್ಗಟ್ಟಾಗಿರಬೇಕು:
ಹಿಂದು ಸಂಘಟನೆಗಳ ಮುಖಂಡ ಮುರಳಿಕೃಷ್ಣ ಹಸಂತಡ್ಕ ಅವರು ಮಾತನಾಡಿ ನಾವು ಧರ್ಮ ಸಂಕಲ್ಪದ ಮಾಡುವ ಕಾರ್ಯಕ್ರಮ ಮಾಡಬೇಕು. ಸಮಾವೇಶ ಧರ್ಮದ ಉಳಿವಿಗಾಗಿ ಸಂದೇಶ ಕೊಡುವ ಕಾರ್ಯಕ್ರಮ ಆಗಬೇಕು. ಸುಳ್ಯದಲ್ಲಿ ಮತಾಂತರ ವಿರುದ್ಧ ಮನೆ ಮನೆಗೆ ಸುದ್ದಿ ಹರಡಿ ಹಿಂದುಗಳ ಮನಮುಟ್ಟಿಸುವ ಮೂಲಕ ದೊಡ ಹಿಂದು ಸಮಾಜೋತ್ಸವ ನಡೆಯಿತು. ನಾಳಿದಿನ ಕಾರ್ಯಕ್ರಮವೂ ಕೂಡಾ ನಂಬಿಕೆಗೆ ಚ್ಯುತಿ ತಂದವರಿಗೆ ಸಂದೇಶ ಕೊಡುವ ಕಾರ್ಯಕ್ರಮ ಆಗಬೇಕು.
ಸಮಾವೇಶ ಭಜನೆಯ ಮೂಲಕ ಮಾಡಿದರೆ ಮಹತ್ವ ಬರುತ್ತದೆ:
ಭಜನಾ ಪರಿಷತ್‌ನ ಪ್ರಮುಖರಾಗಿರುವ ಧನ್ಯಕುಮಾರ್ ಜೈನ್ ಅವರು ಮಾತನಾಡಿ ಧರ್ಮಸ್ಥಳ ಕ್ಷೇತ್ರದ ಮೇಲಿನ ಅಪಪ್ರಚಾರ ಮುಂದೆ ನಮ್ಮ ಮನೆಗೂ ಬರುತ್ತದೆ ಎಂದು ಗ್ರಹಿಸಬೇಕು. ಹಾಗಾಗಿ ಸಮಾವೇಶ ಯಶಸ್ವಿಗೆ ಭಜನೆ ತಂಡ ಸೇರಿಸಬೇಕು. ಭಜನೆಯ ಮೂಲಕ ಸಮಾವೇಶ ಮಾಡಿದರೆ ಅದಕ್ಕೆ ಮಹತ್ವ ಬರುತ್ತದೆ. ಎಲ್ಲಾ ಭಜನಾ ಮಂಡಳಿಗೂ ಮಾಹಿತಿ ನೀಡಿದರೆ ಉತ್ತಮ ಎಂದರು.
ಹಿOದು ಧರ್ಮ ಉಳಿಯಬೇಕು:
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಮೊಕ್ತೇಸರ ನ್ಯಾಯವಾದಿ ಚಿದಾನಂದ ಬೈಲಾಡಿ ಅವರು ಮಾತನಾಡಿ ಧರ್ಮ ಕ್ಷೇತ್ರ ಉಳಿಯಬೇಕು ಮತ್ತು ಹಿಂದು ಧರ್ಮ ಉಳಿಯಬೇಕು. ಯಾವುದೇ ಕ್ಷೇತ್ರಕ್ಕೆ ತೊಂದರೆ ಬಾರದ ಹಾಗೆ ನಾವು ನೋಡಬೇಕೆಂದರು.
ಶಶಿಧರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಮಾಜದಲ್ಲಿ ಪ್ರಸ್ತುತ ವಿದ್ಯಾಮಾನದಲ್ಲಿ ಪುಣ್ಯಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ವಿರುದ್ದ ಕಪೋಲಕಲ್ಪಿತ ಘಟನೆ ಸೃಷ್ಡಿ ಮಾಡಿ ಕ್ಷೇತ್ರದ ಪಾವಿರ್ತ್ಯತೆಯನ್ನು ಹಾಳು ಮಾಡುವ ಷಡ್ಯಂತ್ರ ನಡೆಯುತ್ತಿದೆ. ಈ ಕುರಿತು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಖಂಡನೆ ಮಾಡಬೇಕೆಂಬ ನಿಟ್ಟಿನಲ್ಲಿ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂಚಾಲಕ ಮೊಹನ್ ಆಳ್ಚರ ನೇತೃತ್ವದಲ್ಲಿ ಸಭೆ ಮಾಡಿದಾಗ ಜನಾಂದೊಲನದ ಮೂಲಕ ಖಂಡನೆ ವ್ಯಕ್ತಪಡಿಸಬೇಕೆಂಬ ತೀರ್ಮಾನ ಕೈಗೊಳ್ಳಲಾಯಿತು. ಈ ಸಭೆಯಲ್ಲಿ ಶಶಿಕುಮಾರ್ ರೈ, ಸಾಜ ರಾಧಾಕೃಷ್ಣ ಆಳ್ವ, ಪದ್ಮನಾಭ ಶೆಟ್ಟಿ , ಮಹಾಬಲ ರೈ ವಳತ್ತಡ್ಕ, ಲೊಕೇಶ್ ಹೆಗ್ಡೆ ಸಹಿತ ಹಲವಾರು ಮಂದಿ ಸೇರಿ ತಾಲೂಕು ಮಟ್ಟದಲ್ಲಿ ಸಮಾವೇಶವನ್ನು ಹೇಗೆ ಮಾಡುವ ಎಂದು ಚರ್ಚಿಸಿದಂತೆ ಪುತ್ತೂರಿನಲ್ಲಿ ಭಕ್ತರ ಅಭಿಪ್ರಾಯ, ಸಲಹೆ ಪಡೆಯಲು ಈ ತುರ್ತು ಸಭೆ ನಡೆಸಲಾಗಿದೆ ಎಂದು ಅವರು ಸಭೆಗೆ ತಿಳಿಸಿದರು.
ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಿನಯ ಸುವರ್ಣ, ಮಹಾಬಲ ರೈ ವಳತ್ತಡ್ಕ, ಸುಭಾಷ್ ರೈ ಬೆಳ್ಳಿಪ್ಪಾಡಿ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್.ಬಿ ಜಯರಾಮ ರೈ, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಮಾಜಿ ಪುರಸಭಾ ಅಧ್ಯಕ್ಷ ರಾಜೇಶ್ ಬನ್ನೂರು, ಕೆಯ್ಯೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಕೆ ಜಯರಾಮ ರೈ, ರೈ ಎಸ್ಟೇಟ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಅಶ್ವಿನ್ ರೈ ಸವಣೂರು, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ರವೀಂದ್ರನಾಥ ರೈ ಬಳ್ಳಮಜಲು, ಜನಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ಲೋಕೇಶ್ ಹೆಗ್ಡೆ, ವಿಶ್ಚಹಿಂದು ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಯು.ಪೂವಪ್ಪ, ನಗರಸಭಾ ಸದಸ್ಯ ಜೀವಂಧರ್ ಜೈನ್, ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಕಡಬ, ಅಜಿತ್ ಪ್ರಸಾದ್ ರೈ, ಸದಾಶಿವ ರೈ ಸೂರಂಬೈಲು, ವಿಶ್ವೇಶ್ಚರ ಭಟ್ ಬಂಗಾರಡ್ಕ, ಜನಜಾಗೃತಿ ವೇದಿಕೆ ವಲಯ ಅಧ್ಯಕ್ಷ ಸತೀಶ್ ಪರ್ಲಡ್ಕ, ರಣಮಂಗಲ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ, ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ರಾಜೇಶ್ ರೈ ಪರ್ಪುಂಜ, ಜಗನ್ನಾಥ ರೈ ಕೋರ್ಮಂಡ, ಒಳಮೊಗ್ರು ಗ್ರಾ.ಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸತೀಶ್ ಗೌಡ ಒಳಗುಡ್ಡೆ, ಮಮತಾ ರೈ ಕೆಯ್ಯೂರು, ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ್ ರಾವ್ ಬಪ್ಪಳಿಗೆ, ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿ ಆರ್.ಸಿ.ನಾರಾಯಣ, ಯುವರಾಜ್ ಪೆರಿಯತ್ತೊಡಿ, ಹರಿಪ್ರಸಾದ್, ಮಹಾವೀರ ಆಸ್ಪತ್ರೆಯ ಡಾ. ಅಶೋಕ್ ಪಡಿವಾಳ್, ದೀಕ್ಷಾ ಪೈ, ಪೂರ್ಣಿಮಾ, ರಾಮಣ್ಣ ಗೌಡ ಗುಂಡೋಲೆ ಸಹಿತ ಹಲವಾರು ಮಂದಿ ಸಭೆಯಲ್ಲಿ ಭಾಗವಹಿಸಿದ್ದರು.
ಸಮಾವೇಶದಲ್ಲಿ 17 ಅಜೆಂಡಾ…
ಡಾ| ಮೋಹನ್ ಅಳ್ವ ಅವರು ಸಮಾವೇಶದಲ್ಲಿ 17 ಅಜೆಂಡಾಗಳನ್ನು ಸಿದ್ದಪಡಿಸಿದ್ದಾರೆ. ಅದರಂತೆ ಸಮಾವೇಶ ನಡೆಯಬೇಕಾಗಿದೆ. ಸಮಾಜವೇಶದಲ್ಲಿ ಎಲ್ಲಾ ಸಮಾನಮನಸ್ಕರನ್ನು ಒಳಗೊಂಡ ಸಮತೋಲಿತ ಸಮಾವೇಶ ಆಗಿರಬೇಕೆ ಹೊರತು ರಾಜಕೀಯ, ಜಾತಿ, ಸಮುದಾಯಕ್ಕೆ ವಾಲಬಾರದು. ಸ್ವಾಮೀಜಿ, ವಿದ್ವಾಂಸರು, ಗಣ್ಯರು ಸೇರಿ 100 ಮಂದಿಯ ವೇದಿಕೆ, ಭಾಷಣಕ್ಕೆ ಸಂಪನ್ಮೂಲ ವ್ಯಕ್ತಿ ಆಯಾ ತಾಲೂಕಿನವರದ್ದು ಜವಾಬ್ದಾರಿ. ಸಮಾವೇಶವು ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಕಾವಂದರ ಗೌರವವನ್ನು ಹೆಚ್ಚಿಸುವಂತಿರಬೇಕು. ದುಂದುವೆಚ್ಚದಲ್ಲಿ ಖರ್ಚು ಮಾಡುವಂತಿಲ್ಲ. ಅಗತ್ಯದ ಖರ್ಚನ್ನು ಆಯಾ ತಾಲೂಕಿನಲ್ಲೇ ಬರಿಸಬೇಕು. ನಮ್ಮ ಆಗ್ರಹ ನ್ಯಾಯಕ್ಕಾಗಿ.. ಹೋರಾಟಕ್ಕಲ್ಲ. ವೈಯುಕ್ತಿಕ ನಿಂಧನೆಗೆ ಸರಕಾರದ ದೂಶನೆಗೆ, ಅಧಿಕಾರಿಗಳ ಅವಮಾನಕ್ಕೆ ಮತ್ತು ಮಾನಹಾನಿ ಭಾಷಣಕ್ಕೆ ಅವಕಾಶವಿಲ್ಲ. ವಿದ್ಯುನ್ಮಾನ ಸಮಾಜಿಕ ಜಾಲತಾಣದ ಸ್ವೇಚೆಗೆ ಕಡಿವಾಣ ಹಾಕಬೇಕು. ಸತ್ಯಕ್ಕೆ ಜಯಸಿಗಬೇಕು. ಜನರ ವಿವರ, ಸಂಘಟನೆ ಹೊತ್ತವರ ಮಾಹಿತಿ ಮತ್ತು ಮಾದ್ಯಮದಲ್ಲಿ ಬಂದ ವರದಿಗಳನ್ನು ಪಡೆದು ಕೊಂಡು ಶ್ರೀಕ್ಷೇತ್ರ ಧರ್ಮಸ್ಥಳದ ಜನಗ್ರಹ ಕೇಂದ್ರ ಕಚೇರಿಗೆ ತಲುಪಿಸುವುದು. ಅವಿಭಜಿತ ದಕ್ಷಿಣ ಕನ್ನಡದ ಎಲ್ಲಾ ತಾಲೂಕಿನಲ್ಲಿ ಸಮಾವೇಶ ಮುಗಿದ ಬಳಿಕ ಸಮಾವೇಶಗಳ ಎಲ್ಲಾ ವರದಿಗಳನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಧಿಕಾರಿಗಳಿಗೆ ಜನಾಗ್ರಹ ನಿರ್ಣಯ ಮಂಡಿಸಲಾಗುವುದು. ಸಮಾವೇಶದ ಪ್ರಾರಂಭದಲ್ಲಿ ಕಾವಂದರ ಸಾಧನೆಯ ಭಾಷಣ. ಉಪನ್ಯಾಸ, ದಿಕ್ಸೂಚಿ ಭಾಷಣ ಇರುತ್ತದೆ. ಈ ಸಮಾವೇಶ ಎಲ್ಲಾ ತಾಲುಕು ಕೇಂದ್ರಗಳಲ್ಲಿ ನಡೆಸುವ ಕುರಿತು ಸಮಿತಿಯಲ್ಲಿ ನಿರ್ಣಯ. ಪುತ್ತೂರಿನಲ್ಲಿ ಸೆ.1ಕ್ಕೆ ದಿನಾಂಕ ನಿಗದಿ. ಮಹಾಲಿಂಗೇಶ್ವರ ದೇವಸ್ಥಾನದ ಎದುರು ಗದ್ದೆಯಲ್ಲಿರುವ ಸಾರ್ವಜನಿಕ ಗಣೇಶೋತ್ಸವದ ವೇದಿಕೆಯಲ್ಲಿ ಸಮಾವೇಶ ನಡೆಯಲಿದೆ. ಸುಮಾರು 10ಸಾವಿರ ಜನರ ನಿರೀಕ್ಷೆ. ಪುತ್ತೂರನ್ನು ಕೇಂದ್ರವನ್ನಾಗಿಸಿ ಈ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಚಕ್ರವರ್ತಿ ಸೂಲಿಬೆಲೆಯವರು ದಿಕ್ಸೂಚಿ ಭಾಷಣಕ್ಕೆ ನಿಯೋಜನೆ ಮಾಡಲಾಗಿದೆ. ಸಮಾವೇಶದ ಮೊದಲು ಎಲ್ಲರು ಬೆಳಿಗ್ಗೆ 9 ಗಂಟೆಗೆ ಸೇರಬೇಕು. 10 ಗಂಟೆಗೆ ಸಮಾವೇಶ ಆರಂಭ. ಮಧ್ಯಾಹ್ನ 1 ಗಂಟೆಗೆ ಸಮಾಪ್ತಿಯಾಗಬೇಕು. ಜನರು ಬರುವ ದೃಷ್ಟಿಯಿಂದ 9 ವಲಯಗಳನ್ನು ವಿಂಗಡಣೆ ಮಾಡಲಾಗಿದೆ. ಒಂದೊOದು ವಲಯದಿಂದ 1ಸಾವಿರ ಸಂಖ್ಯೆ ಸೇರಬೇಕು. ಪುತ್ತೂರು ಪೇಟೆಯಿಂದ 3ಸಾವಿರ ಮಂದಿ ಸೇರಬೇಕು. ಒಟ್ಟು 12ಸಾವಿರ ಜನರ ಸೇರುವಿಕೆ ನಿರೀಕ್ಷೆ. ಇದಕ್ಕಾಗಿ ಸಮಿತಿ ರಚನೆಯೂ ಆಗಬೇಕು. ನಮ್ಮ ಧರ್ಮ ಉಳಿಸಲು ವಿಜೃಂಭಣೆ ಕಾರ್ಯಕ್ರಮ ಆಗಬೇಕು.
ಶಶಿಕುಮಾರ್ ರೈ ಬಾಲ್ಯೊಟ್ಟು
ಸಮಾವೇಶದ ತಾಲೂಕು ಉಸ್ತುವಾರಿ