ಹಾಸನ: ಗಣೇಶ ಮೆರವಣಿಗೆಯಲ್ಲಿ ಭೀಕರ ದುರಂತ ಸಂಭವಿಸಿದೆ. ಗಣಪತಿ ಮೆರವಣಿಗೆ ಹೋಗುವಾಗ ಜನರ ಮೇಲೆ ಟ್ರಕ್ ನುಗ್ಗಿದ್ದರಿಂದ ಘಟನೆಯಲ್ಲಿ 7 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಯು ಹಾಸನ ತಾಲೂಕಿನ ಮೊಸಳೆಹೊಸಹಳ್ಳಿಯಲ್ಲಿ ನಡೆದಿದೆ.
ಅದ್ಧೂರಿಯಾಗಿ ಗಣೇಶ ಮೆರವಣಿಗೆ ಸಾಗುತ್ತಿರುವ ವೇಳೆ ಟ್ರಕ್ವೊಂದು ಜನರ ಮೇಲೆ ನುಗ್ಗಿದೆ. ಚಾಲಕನ ಅಜಾಗುರಕತೆಯಿಂದ ಈ ಘಟನೆ ನಡೆದಿದೆ. ಡಿವೈಡರ್ಗೆ ಡಿಕ್ಕಿ ಆದ ಟ್ರಕ್ ಒಂದು ಬದಿಯಿಂದ ಇನ್ನೊಂದು ಬದಿಗೆ ಬಂದು ಜನರ ಮೇಲೆ ಟ್ರಕ್ ಹರಿದಿದೆ. ಇದರ ಪರಿಣಾಮ ಮೆರವಣಿಗೆಯಲ್ಲಿದ್ದ 7 ಜನರು ಜೀವ ಬಿಟ್ಟಿದ್ದಾರೆ. ಇನ್ನು ಸಾವಿನ ಸಂಖ್ಯೆಯ ಹೆಚ್ಚಾಗುವ ಸಾಧ್ಯತೆ ಇದೆ.
ಲಾರಿ ಏಕಾಏಕಿ ನುಗ್ಗಿದ್ದರಿಂದ 10 ರಿಂದ 15 ಜನರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಕೆಲವರಂತೂ ನೋವಿನಿಂದ ನರಳುತ್ತಿದ್ದಾರೆ. ಇದು ಅಪಘಾತ ವಲಯ ಎಂದು ಗೊತ್ತಿದ್ದರೂ ಟ್ರಕ್ ವೇಗವಾಗಿ ಬಂದಿದ್ದೇ ಈ ದುರಂತಕ್ಕೆ ಕಾರಣವಾಗಿದೆ.