ಮೈಸೂರು: ಮೈಸೂರಿನಲ್ಲಿ ಬಾಲಕಿ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಅಲೆಮಾರಿ ಬಾಲಕಿ ಮೇಲಿನ ಪೈಶಾಚಿಕ ಕೃತ್ಯ ಎಸಗಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾರ್ತಿಕ್ ಕಾಲಿಗೆ ಪೊಲೀಸರು ಗುಂಡೇಟು ಕೊಟ್ಟು ಕೆಡವಿದ್ದಾರೆ.
ಹೊಟ್ಟೆಪಾಡಿಗಾಗಿ ಬಲೂನ್ ವ್ಯಾಪಾರಕ್ಕಾಗಿ ಮೈಸೂರು ದಸರಾಕ್ಕೆ ಬಂದಿದ್ದ ಹಕ್ಕಿಪಿಕ್ಕಿ ಜನಾಂಗದ ಸುಮಾರು 50 ಕುಟುಂಬಗಳು ಅರಮನೆ ಮುಂಭಾಗದ ದೊಡ್ಡ ಕೆರೆ ಮೈದಾನದ ಬಳಿ ತಾತ್ಕಾಲಿಕವಾಗಿ ತಂಗಿದ್ದವು. ಆದ್ರೆ, ನಿನ್ನೆ ರಾತ್ರಿ ಟೆಂಟ್ ನಲ್ಲಿ ಮಲಗಿದ್ದ 10 ವರ್ಷದ ಬಾಲಕಿಯನ್ನು ಎಳೆದೊಯ್ದು ಅತ್ಯಾಚಾರ ಎಸಗಿ ಬಳಿಕ ಕೊಲೆ ಮಾಡಿ ಪರಾರಿಯಾಗಿದ್ದ. ಸದ್ಯ ಸಿಸಿಟಿವಿ ಆಧಾರದ ಮೇಲೆ ಹಂತಕ ಕಾರ್ತಿಕನನ್ನು ಪೊಲೀಸರು ಬಂಧಿಸಿದ್ದಾರೆ.
ಕೃತ್ಯ ಎಸಗಿ ಮೈಸೂರು ಬಸ್ ನಿಲ್ದಾಣದಿಂದ ಕೊಳ್ಳೇಗಾಲಕ್ಕೆ ಪರಾರಿಯಾಗಿದ್ದ ಆರೋಪಿಯನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ. ಇನ್ನು ಮೇಟಗಳ್ಳಿ ಬಳಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾರ್ತಿಕ್ ಕಾಲಿಗೆ ಗುಂಡು ಹಾರಿಸಿದ್ದರೆ. ಹೀಗಾಗಿ ಆರೋಪಿ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ತಕ್ಷಣವೇ ಆರೋಪಿಯನ್ನು ಬಂಧಿಸಿದ ಪೊಲೀಸರು, ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಕೊಳ್ಳೇಗಾಲದಲ್ಲಿ ಸಿಕ್ಕ ಕಾರ್ತಿಕ್ ಮೇಟಗಳ್ಳಿ ಬಳಿ ಕಾನ್ಸ್‌ಟೇಬಲ್ ವೆಂಕಟೇಶ್ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನಸಿದ್ದಾನೆ. ಈ ವೇಳೆ ಸಬ್ ಇನ್ಸ್‌ಪೆಕ್ಟರ್ ಜೈಕೀರ್ತಿ ಅವರು ಆರೋಪಿ ಕಾಲಿಗೆ ಗುಂಡು ಹೊಡೆದಿದ್ದಾರೆ. ಸದ್ಯ ಆರೋಪಿ ಕಾರ್ತಿಕ್ ನನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಗುತ್ತಿದ್ದು, ಆಸ್ಪತ್ರೆಗೆ ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಭೇಟಿ ಮಾಹಿತಿ ಪಡೆದುಕೊಂಡರು.
ಹೊಟ್ಟೆ ಪಾಡಿಗಾಗಿ ದೂರ ಊರಿನಿಂದ ಬಂದಿದ್ದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದ ಕಾರ್ತಿಕ್ ಅರೆಸ್ಟ್ ಆಗುತ್ತಿದ್ದಂತೆ ಹಲವರು ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಗಲ್ಲು ಶಿಕ್ಷೆಗೆ ಗುರಿಪಡಿಸುವಂತೆ ಕೆಲವರು ಒತ್ತಾಯಿಸಿದ್ದರೆ, ಇನ್ನು ಕೆಲವರು ಎನ್‌ಕೌಂಟರ್ ಮಾಡೇಕೆಂದು ಆಗ್ರಹಿಸಿದ್ದಾರೆ.
ಮೈಸೂರಿನ ಸಿದ್ದಲಿಂಗಪುರ ನಿವಾಸಿಯಾಗಿರುವ ಕಾರ್ತಿಕ್, ಮಂಡ್ಯದಲ್ಲಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಸಿಕ್ಕಿಬಿದ್ದಿದ್ದ. ಇನ್ನು ಈ ಪ್ರಕರಣದಲ್ಲಿ 2 ವರ್ಷ ಜೈಲಿನಲ್ಲಿದ್ದು, ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ. ಆದ್ರೆ, ಊರಿಗೆ ಹೋಗದೆ ಮದ್ಯ ಸೇವಿಸಿ ಎಲ್ಲೆಂದರಲ್ಲಿ ಅಲೆಯುತ್ತಿದ್ದ. ಮದ್ಯ ವ್ಯಸನಿ ಕಾರ್ತಿಕ್ ಕಣ್ಣಿಗೆ ಪಾಪ 10 ವರ್ಷದ ಬಾಲಕಿ ಬಿದ್ದಿದ್ದು, ಆಕೆಯನ್ನು ಎತ್ತಿಕೊಂಡು ಹೋಗಿ ಅತ್ಯಾಚಾರ ಮಾಡಿ ಬಳಿಕ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದ.