ಸರ್ಕಾರಿ ಮತ್ತು ಅನುದಾನಿತ ಶಾಲಾ ಆವರಣಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಚಟುವಟಿಕೆಗಳು ಹಾಗೂ ಶಾಖೆ ನಡೆಸಲು ಅನುಮತಿ ನಿರಾಕರಿಸುವಂತೆ ಕೋರಿ ಸಚಿವ ಪ್ರಿಯಾಂಕ್ ಖರ್ಗೆ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ. ಈ ಮನವಿಯನ್ನು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲು ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ. ಸರ್ಕಾರಿ ಶಾಲಾ ಕಾಲೇಜುಗಳ ಆವರಣ, ಉದ್ಯಾನವನ, ಸರ್ಕಾರಿ ಮೈದಾನ ಮತ್ತು ಹಾಸ್ಟೆಲ್ ಕ್ಯಾಂಪಸ್ನಲ್ಲಿ RSS ಚಟುವಟಿಕೆ ನಿರ್ಬಂಧಿಸಲು ಆಗ್ರಹಿಸಲಾಗಿದೆ.
ಪ್ರಿಯಾಂಕ್ ಖರ್ಗೆ ಮನವಿ ಪತ್ರದಲ್ಲೇನಿದೆ?
ಜನ ಸಮುದಾಯದಲ್ಲಿ ದ್ವೇಷ ಬಿತ್ತುವ ವಿಭಜಕ ಶಕ್ತಿಗಳು ತಲೆ ಎತ್ತಿದಾಗ ಅವುಗಳನ್ನು ನಿಗ್ರಹಿಸುವುಕ್ಕಾಗಿ ಹಾಗೂ ದೇಶದ ಜಾತ್ಯತೀತ ಮೌಲ್ಯಗಳನ್ನು ಎತ್ತಿ ಹಿಡಿಯುವುದಕ್ಕಾಗಿ ಸಮಗ್ರತೆ, ಸಮಾನತೆ ಮತ್ತು ಏಕತೆಯ ಮೂಲಭೂತ ತತ್ವಗಳನ್ನೊಳಗೊಂಡ ಸಂವಿಧಾನವು ನಮಗೆ ಅಧಿಕಾರವನ್ನು ನೀಡುತ್ತದೆ.ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂಬ ಹೆಸರಿನ ಸಂಘಟನೆಯು ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಹಾಗೂ ಸಾರ್ವಜನಿಕ ಸರ್ಕಾರಿ ಮೈದಾನಗಳನ್ನು ಬಳಸಿಕೊಂಡು ಶಾಖೆ ನಡೆಸುತ್ತಾ ಘೋಷಣೆಗಳನ್ನು ಕೂಗು್ತ್ತಾ ಮಕ್ಕಳು , ಯುವ ಸಮುದಾಯದ ಮನಸ್ಸಿನಲ್ಲಿ ಭಾರತ ಐಕ್ಯತೆಯ ವಿರುದ್ಧವಾಗಿ ಹಾಗೂ ಸಂವಿಧಾನದ ಆಶಯಗಳ ವಿರುದ್ಧವಾಗಿ ನಕರಾತ್ಮಕ ಆಲೋಚನೆಗಳನ್ನು ತುಂಬಲಾಗುತ್ತಿದೆ.
ಪೊಲೀಸ್ ಅನುಮತಿ ಪಡೆಯದೆ ದೊಣ್ಣೆಗಳನ್ನು ಹಿಡಿದು ಆಕ್ರಮಣಕಾರಿ ಪ್ರದರ್ಶನ ನಡೆಸುವ ಮೂಲಕ ಮಕ್ಕಳು ಹಾಗೂ ಯುವಜನರ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಲಾಗುತ್ತಿದೆ. ನಾಡಿನ ಮಕ್ಕಳು, ಯುವ ಸಮುದಾಯ, ಸಾರ್ವಜನಿಕರು ಮತ್ತು ಸಮಾಜದ ಸ್ವಾಸ್ಥ್ಯದ ಹಿತದೃಷ್ಟಿಯಿಂದ ಸರ್ಕಾರಿ ಶಾಲೆಗಳು ಹಾಗೂ ಸರ್ಕಾರದ ಅನುದಾನಿತ ಶಾಲೆಗಳು ಮತ್ತು ಮೈದಾನಗಳು, ಉದ್ಯಾನವನಗಳು, ಮುಜರಾಯಿ ಇಲಾಖೆಯ ದೇವಸ್ಥಾನಗಳು, ಪುರಾತತ್ವ ಇಲಾಖೆಯ ಸ್ಥಳಗಳು ಸೇರಿದಂತೆ ಯಾವುದೇ ಸರ್ಕಾರಿ ಸ್ಥಳಗಳಲ್ಲಿ ಆರ್ ಎಸ್ ಎಸ್ ಸಂಘಟನೆಯು ಶಾಖೆ, ಸಾಂಘಿಕ್ ಅಥವಾ ಬೈಠಕ್ ಹೆಸರಲ್ಲಿ ನಡೆಸುವ ಎಲ್ಲಾ ಬಗೆಯ ಚಟುವಟಿಕೆಗಳಿಗೆ ನಿಷೇಧ ಹೇರಬೇಕು ಎಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ಸಿಎಂಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರ ಪತ್ರದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಈ ಕುರಿತಾಗಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ಎನ್ನಲಾಗಿದೆ.