ಪುತ್ತೂರು: ಕೆಲ ದಿನಗಳ ಹಿಂದೆ ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ವೇಳೆ ಹೆಚ್ಚೇನು ದಾಳಿಗೆ ಬಲಿಯಾಗಿದ್ದ ಬಾಲಕಿ ಇಶಾ ಅವರ ಕುಟುಂಬಕ್ಕೆ ಸರಕಾರದಿಂದ 5 ಲಕ್ಷ ರೂ.ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಕೊಂಬೆಟ್ಟು ಮೈದಾನದಲ್ಲಿ ನಡೆದ 13ನೇ ವರ್ಷದ ಅಶೋಕ ಜನಮನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದ ವೇಳೆ ಶಾಸಕ ಅಶೋಕ್ ಕುಮಾರ್ ರೈ ಅವರ ಮನವಿಯಂತೆ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದರು.
ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5 ಲಕ್ಷ ರೂ.ಪರಿಹಾರ ನೀಡಲು ಆದೇಶವನ್ನೂ ಮಾಡಿದ್ದೇನೆ. ಹದಿನೈದು ದಿನಗಳೊಳಗೆ ಹಣ ಬರಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಕೆಲ ದಿನಗಳ ಹಿಂದೆ ಸೇಡಿಯಾಪು ಸಮೀಪದ ಕೂಟೇಲು ಎಂಬಲ್ಲಿ ಹೆಚ್ಚೇನುಗಳು ದಾಳಿ ನಡೆಸಿದ ಪರಿಣಾಮ ಕೂಟೇಲು ಕಿರಣ್ ಎಂಬವರ ಪುತ್ರಿ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿನಿ ಇಶಾ ಅವರು ಸಾವಿಗೀಡಾಗಿದ್ದರು.
ಹೆಚ್ಚೇನು ದಾಳಿಯಿಂದ ತೀವ್ರ ಅಸ್ವಸ್ಥಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿರುವ, ಕೂಟೇಲು ಕಿಶೋರ್ ಎಂಬವರ ಪುತ್ರ, ವಿವೇಕಾನಂದ ಕ.ಮಾ.ಶಾಲೆಯ 5ನೇ ತರಗತಿ ವಿದ್ಯಾರ್ಥಿ ಪ್ರತ್ಯಶ್ ಅವರಿಗೆ ಮಂಗಳೂರು ಡಾ|ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿಯ ಕೆಎಂಸಿ ಆಸ್ಪತ್ರೆಯ ವೈದ್ಯರು ತ್ವರಿತ ಮತ್ತು ಸೂಕ್ತ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಲಕ ಇದೀಗ ಚೇತರಿಸಿಕೊಂಡಿದ್ದಾರೆ. ಮಕ್ಕಳನ್ನು ರಕ್ಷಣೆ ಮಾಡಲು ಹೋಗಿದ್ದ ನಾರಾಯಣ ಗೌಡರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತೆರಳಿದ್ದಾರೆ.