ಕಡಬ ತಾಲೂಕಿನ ಕಾಣಿಯೂರಿನ ಮಹಿಳೆಯೊಬ್ಬರ ಕತ್ತಿನಲ್ಲಿದ್ದ ರೂ 2 ಲಕ್ಷ ಮೌಲ್ಯದ ಚಿನ್ನದ ಸರವನ್ನು ಪುತ್ತೂರು-ಕಾಣಿಯೂರು-ಬಾಳುಗೋಡು ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಕಳ್ಳರು ಎಗರಿಸಿರುವ ಘಟನೆ ಅ27 ರಂದು ಸಮಯ ನಡೆದಿದೆ.
ಮಹಿಳೆ ಮತ್ತು ಅವರ ಸಹೋದರಿಯರು ಅಕ್ಟೋಬರ್ 27 ರಂದು ಸಂಜೆ 4.17 ಕ್ಕೆ ಪುತ್ತೂರಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಕಾಣಿಯೂರು-ಬಾಳುಗೋಡು ಮಾರ್ಗದ ಬಸ್ ಹತ್ತಿದ್ದಾರೆ. ಸಂಜೆ 4:45ರ ಸುಮಾರಿಗೆ ಕಾಣಿಯೂರಿನ ಕಡೆಗೆ ಪ್ರಯಾಣಿಸುತ್ತಿದ್ದಾಗ, ಮಹಿಳೆಗೆ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಳವಾಗಿರುವುದು ಅವರ ಗಮನಕ್ಕೆ ಬಂದಿದೆ.
ಹುಡುಕಾಟ ವಿಫಲ, ದೂರು ದಾಖಲು:
ಸರ ಕಳವಾಗಿರುವ ಬಗ್ಗೆ ಅರಿತ ತಕ್ಷಣವೇ ಮಹಿಳೆ ಮತ್ತು ಅವರ ಕುಟುಂಬಸ್ಥರು ಸವಣೂರು ಹಾಗೂ ಕಾಣಿಯೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯಾಪಕ ಹುಡುಕಾಟ ನಡೆಸಿದ್ದಾರೆ. ಆದರೆ, ಕಳವಾದ ಸರ ಪತ್ತೆಯಾಗಿಲ್ಲ. ಇದಾದ ಬಳಿಕ, ಅವರ ಪುತ್ರ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸ್ ತನಿಖೆ ಆರಂಭ:
ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ:100/2025 ಕಲಂ: 303 (2) BNS ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಬಸ್ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಕಳ್ಳರನ್ನು ಪತ್ತೆಹಚ್ಚಲು ಕಾರ್ಯೋನ್ಮುಖರಾಗಿದ್ದಾರೆ.




























