ಪ್ರಕರಣದ ಪಿರ್ಯಾದಿದಾರರಾದ ಬೆಳ್ತಂಗಡಿ, ಮಾಲಾಡಿ ಗ್ರಾಮದ ನಿವಾಸಿ ಪ್ರಕಾಶ್ ಶೆಟ್ಟಿ (53) ಎಂಬವರ ದೂರಿನಂತೆ, ಸದ್ರಿಯವರ ಮನೆಯ ಸಮೀಪ ಶ್ರೀಮತಿ ಪ್ರೇಮಾ ಶೆಟ್ಟಿ ಎಂಬವರ ಮನೆಯಿದ್ದು, ಸದ್ರಿ ಪ್ರೇಮಾ ಶೆಟ್ಟಿರವರು ಕೆಲ ಸಮಯದಿಂದ ವಿದೇಶದಲ್ಲಿದ್ದು, ಮನೆಯಲ್ಲಿ ಯಾರೂ ಇಲ್ಲದ ಕಾರಣ ಮನೆಗೆ ಸಿ.ಸಿ ಟಿ.ವಿ ಅಳವಡಿಸಿರುತ್ತಾರೆ. ದಿನಾಂಕ:9/11/2025 ರಂದು ಬೆಳಿಗ್ಗೆ, ಸದ್ರಿ ಪ್ರೇಮಾರವರ ಮಗಳು ಪಿರ್ಯಾದಿದಾರರಿಗೆ ಕರೆ ಮಾಡಿ ಅವರ ತಾಯಿಯ ಮನೆಯಲ್ಲಿ ಯಾರೋ ವ್ಯಕ್ತಿ ಕಳ್ಳತನಕ್ಕೆ ಬಂದಿರುವಂತೆ ಸಿ.ಸಿ ಟಿ.ವಿಯಲ್ಲಿ ಕಾಣುತ್ತಿರುವುದಾಗಿ ತಿಳಿಸಿರುತ್ತಾರೆ.
ತಕ್ಷಣ ಪಿರ್ಯಾದಿದಾರರು ಪ್ರೇಮರವರ ಮನೆಯ ಬಳಿ ತೆರಳಿ ನೋಡಿದಾಗ, ಪ್ರೇಮಾರವರ ಮನೆಯ ಮೇಲ್ಚಾವಣಿಯಲ್ಲಿ ಒಬ್ಬ ಅಪರಿಚಿತ ವ್ಯಕ್ತಿಯು ಕೈಯಲ್ಲಿ ಕಬ್ಬಿಣದ ರಾಡ್ ಹಿಡಿದು ನಿಂತುಕೊಂಡಿದ್ದು, ಪಿರ್ಯಾದಿದಾರರನ್ನು ನೋಡಿ ಕೆಳಗೆ ಹಾರಿ ಓಡಿ ತಪ್ಪಿಸಲು ಪ್ರಯತ್ನಿಸಿರುತ್ತಾನೆ. ಈ ವೇಳೆ ಪಿರ್ಯಾದಿದಾರರು ಆತನನ್ನು ಹಿಡಿಯಲು ಪ್ರಯತ್ನಿಸಿದಾಗ, ಸದ್ರಿ ಅಪರಿಚಿತ ವ್ಯಕ್ತಿಯು ಆತನ ಕೈಯಲ್ಲಿದ್ದ ರಾಡಿನಿಂದ ಹಲ್ಲೆ ನಡೆಸಿರುತ್ತಾನೆ. ಬಳಿಕ ಸ್ಥಳೀಯ ನಿವಾಸಿಗಳ ಸಹಾಯದಿಂದ ಅಪರಿಚಿತ ವ್ಯಕ್ತಿಯನ್ನು ಹಿಡಿಯಲಾಗಿರುತ್ತದೆ. ಆತನ ಬಗ್ಗೆ ವಿಚಾರಿಸಲಾಗಿ ಆತನು ಕೇರಳ ಮೂಲದ, ತಲಪಾಡಿ ನಿವಾಸಿ ಕಿರಣ್ ಎಂಬುದಾಗಿ ತಿಳಿಸಿದ್ದು, ನಂತರ ಆತನನ್ನು ಪೂಂಜಾಲಕಟ್ಟೆ ಠಾಣಾ ಪೊಲೀಸರ ವಶಕ್ಕೆ ಒಪ್ಪಿಸಲಾಗಿರುತ್ತದೆ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅ.ಕ್ರ: 73/2025, ಕಲಂ: 331(1) 62 118(1) 307 BNS ACT ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಆರೋಪಿತನ ಪ್ರಾಥಮಿಕ ವಿಚಾರಣೆಯ ವೇಳೆ ಆರೋಪಿತನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ, ಮಂಗಳೂರು ನಗರ ವ್ಯಾಪ್ತಿಯಲ್ಲಿ ಹಾಗೂ ಕೇರಳ ರಾಜ್ಯದಲ್ಲಿ ಸೇರಿದಂತೆ, ಒಟ್ಟು 13 ಪ್ರಕರಣಗಳು
ದಾಖಲಾಗಿರುವುದು ತಿಳಿದುಬಂದಿದ್ದು, ತನಿಖೆ ಮುಂದುವರಿದಿರುತ್ತದೆ.



























