ಪುತ್ತೂರು : ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವ ವರ್ಷದ ಪ್ರಯುಕ್ತ ದ.ಕ. ಜಿಲ್ಲಾ ಬಿಜೆಪಿ ವತಿಯಿಂದ ಆಟಲ್ ವಿರಾಸತ್ ಬೃಹತ್ ಸಮಾವೇಶ ನ. 19ರಂದು ಪುತ್ತೂರಿನಲ್ಲಿ ನಡೆಯಲಿದ್ದು ಗ್ರಾಮ ಗ್ರಾಮಗಳಿಂದ ಕಾರ್ಯಕರ್ತರ ದಂಡೇ ಹರಿದು ಬರುವ ನಿರೀಕ್ಷೆ ಇದ್ದು ಇದಕ್ಕಾಗಿ ಸಕಲ ಸಿದ್ಧತೆ ಪೂರ್ಣಗೊಂಡಿದೆ.
ನಗರದ ಮುಖ್ಯ ರಸ್ತೆಗಳ ಇಕ್ಕೆಲೆಗಳಲ್ಲಿ ಬಿಜೆಪಿ ಧ್ವಜಗಳು ರಾರಾಜಿಸುತಿದ್ದು ಸಮಾವೇಶ ನಡೆಯುವ ಪುತ್ತೂರು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಬಳಿಯ ಮೈದಾನ ಕೇಸರಿಮಯವಾಗಿದ್ದು ಕಾರ್ಯಕರ್ತರ, ನಾಯಕರ ಸ್ವಾಗತಕ್ಕೆ ಸಿದ್ಧವಾಗಿದೆ. ಅಟಲ್ ಸ್ಮರಣೆಗೆ ಮೈದಾನ ಸನ್ನದ್ಧವಾಗಿದೆ.
ಬೆಳಗ್ಗೆ 9.30ಕ್ಕೆ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಮೆರವಣಿಗೆ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್, ಸಂಸದ ಕ್ಯಾ/ ಬ್ರಿಜೇಶ್ ಚೌಟ, ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಮಾಜಿ ಸಂಸದ ನಳೀನ್ ಕುಮಾರ್ ಕಟೀಲು, ಜಿಲ್ಲೆಯ ಎಲ್ಲ ಶಾಸಕರು, ಪಕ್ಷದ ಪದಾಧಿಕಾರಿಗಳು ಹಾಗೂ ರಾಜ್ಯ ಮಟ್ಟದ ನಾಯಕರು ಭಾಗವಹಿಸಲಿದ್ದಾರೆ
ಕಾರ್ಯಕ್ರಮದ ವಿಶೇಷತೆಯಾಗಿ ಆಟಲ್ ಬಿಹಾರಿ ವಾಜಪೇಯಿ ಅವರು 1991ರಲ್ಲಿ ಪುತ್ತೂರಿಗೆ ಬಂದು ಭಾಷಣ ಮಾಡಿದ ಸ್ಥಳ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಬಳಿಯ ಮೈದಾನದಲ್ಲೇ ಇದೀಗ ಅಟಲ್ ವಿರಾಸತ್ ಕಾರ್ಯಕ್ರಮ ನಡೆಯಲಿದೆ. ಅಟಲ್ ಬಿಹಾರಿ ವಾಜಪೇಯಿ ಅವರು ದೇಶಕ್ಕೆ ಕೊಟ್ಟಿರುವ ಕೊಡುಗೆಗಳನ್ನು ನೆನಪು ಮಾಡುವ ಪ್ರದರ್ಶನ ನಡೆಯಲಿದೆ




























