ದಿನಾಂಕ: 19.11.2025 ರಂದು ರಾತ್ರಿ ಸುಮಾರು 7.00 ಗಂಟೆ ವೇಳೆಗೆ, ಸೋಮಯಾಜಿ ಟೆಕ್ಸಟೈಲ್ಸ್ ಮಾಲಕ ಕೃಷ್ಣ ಕುಮಾರ್ ಸೋಮಯಾಜಿಯವರು ಅಂಗಡಿಯಲ್ಲಿದ್ದಾಗ, ಬುರ್ಕಾ ಧರಿಸಿ ಗ್ರಾಹಕರ ಸೊಗಿನಲ್ಲಿ ಬಂದ ಓರ್ವ ಹೆಂಗಸು, ಕೃಷ್ಣ ಕುಮಾರ್ ಸೋಮಯಾಜಿಯವರಿಗೆ ಕತ್ತಿಯಿಂದ ಹಲ್ಲೆ ನಡೆಸಿರುತ್ತಾರೆ.
ಈ ವೇಳೆ ಅಲ್ಲಿಂದ ಓಡಿದ ಕೃಷ್ಣ ಕುಮಾರ್ ಸೋಮಯಾಜಿಯವರನ್ನು ಅಟೋ ರಿಕ್ಷಾವೊಂದರಲ್ಲಿ ಸ್ಥಳೀಯ ಆಸ್ಪತ್ರೆಗೆ ಕರೆತಂದು ಅಲ್ಲಿ ಚಿಕಿತ್ಸೆ ಕೊಡಿಸಿರುತ್ತಾರೆ. ಪ್ರಸ್ತುತ ಗಾಯಾಳು ಮಂಗಳೂರಿನ ಎ.ಜೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದು, ಪ್ರಾಣಾಪಾಯದಿಂದ ಪಾರಾಗಿರುತ್ತಾರೆ.
ಹಲ್ಲೆ ನಡೆಸಿದ ಮಹಿಳೆ ಕೃಷ್ಣ ಕುಮಾರ್ ಸೋಮಯಾಜಿರವರ ಪತ್ನಿ ಜ್ಯೋತಿ ಕೆ.ಟಿ ರವರಾಗಿದ್ದು, ಸದ್ರಿ ಅಪಾದಿತೆ ಈ ಹಿಂದೆ ಕೂಡಾ ಅಂಗಡಿಗೆ ಬಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಕೃಷ್ಣ ಕುಮಾರ್ ಸೋಮಯಾಜಿ ಮತ್ತು ಅವರ ಪತ್ನಿ ಜ್ಯೋತಿ ಕೆ.ಟಿ. ರವರ ಮಧ್ಯೆ ಕೌಟುಂಬಿಕ ವಿಚಾರದಲ್ಲಿ ಮನಸ್ತಾಪವಿದ್ದು, ಇದೇ ದ್ವೇಷದಿಂದ ಕೃಷ್ಣ ಕುಮಾರ್ ಸೋಮಯಾಜಿಯವರನ್ನು ಕೊಲ್ಲುವ ಉದ್ದೇಶದಿಂದ ಕತ್ತಿಯಿಂದ ಹಲ್ಲೆ ನಡೆಸಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 131/2025, ಕಲಂ: 118(1), 118(2), 351(3), 109 ಬಿ.ಎನ್.ಎಸ್-2023, U/s: 2(1), (C), 27 Indian Arms act-1959 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.



























