ಪುತ್ತೂರು: ಇತಿಹಾಸ ಪ್ರಸಿದ್ಧಿಯಾಗಿರುವ ಬಡಗನ್ನೂರು ಗ್ರಾಮದ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಭಕ್ತರ ಅನುಕೂಲಕ್ಕಾಗಿ ‘ಯಾತ್ರಿನಿವಾಸ’ ಮತ್ತು ‘ಅನ್ನಛತ್ರ’ ನಿರ್ಮಾಣದ ಯೋಜನೆಗೆ ನ.23ರಂದು ಬೆಳಿಗ್ಗೆ ಗಂಟೆ 10ಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ದಿ ಟ್ರಸ್ಟ್‌ನ ಅಧ್ಯಕ್ಷ ಸಂಜೀವ ಪೂಜಾರಿ ಬಿರ್ವ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ಕ್ಷೇತ್ರದ ಅಭಿವೃದ್ಧಿಗಾಗಿ ಕ್ಷೇತ್ರದ ಆಡಳಿತ ಸಮಿತಿ ಮತ್ತು ದೇಯಿ ಬೈದೆತಿ ಮೂಲಸ್ಥಾನ ಟ್ರಸ್ಟ್‌ನಿಂದ ಭಕ್ತರ ಅನುಕೂಲಕ್ಕಾಗಿ ಯಾತ್ರಿ ನಿವಾಸ ಮತ್ತು ಅನ್ನಛತ್ರ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು ಈಗಾಗಲೇ ಅದರ ನೀಲನಕಾಶೆ ಸಿದ್ದಗೊಂಡಿದೆ. ಕ್ಷೇತ್ರ ಸಮೀಪ 4 ಎಕ್ರೆ ಜಾಗ ಖರೀದಿಸಿ ಅದರಲ್ಲಿ ಯಾತ್ರಿ ನಿವಾಸ ನಿರ್ಮಾಣ ಆಗಲಿದೆ.ಸುಮಾರು ರೂ.7 ಕೋಟಿ ವೆಚ್ಚದಲ್ಲಿ ಯಾತ್ರಿ ನಿವಾಸ ನಿರ್ಮಾಣಗೊಳ್ಳಲಿದೆ.
ಅನ್ನಛತ್ರವು ಗೆಜ್ಜೆಗಿರಿ ಧರ್ಮಚಾವಡಿಯ ಎದುರು ಭಾಗದಲ್ಲಿ ನಿರ್ಮಾಣ ಆಗಲಿದೆ.ಯಾತ್ರಿ ನಿವಾಸದ ಶಿಲಾನ್ಯಾಸವನ್ನು ಬರೋಡಾದ ಉದ್ಯಮಿ ದಯಾನಂದ ಬೊಂಟ್ರ ಅವರು ನೆರವೇರಿಸಲಿದ್ದಾರೆ.ಸೋಲೂರು ಮಠ ಆರ್ಯಈಡಿಗ ಮಹಾಸಂಸ್ಥಾನದ ಪೀಠಾಽಪತಿ ವಿಖ್ಯಾತಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ.ಸಭಾ ಕಾರ್ಯಕ್ರಮವನ್ನು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಉದ್ಘಾಟಿಸಲಿದ್ದಾರೆ.ಕೇಂದ್ರ ಸಚಿವ ಶ್ರೀಪಾದ ನಾಯ್ಕ,ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ, ದ.ಕ.ಸಂಸದ ಕ್ಯಾ|ಬ್ರಿಜೇಶ್ ಚೌಟ, ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಅಶೋಕ್ ಕುಮಾರ್ ರೈ ಸಹಿತ ಜನಪ್ರತಿನಿಽಗಳು, ಹಲವಾರು ಮಂದಿ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದವರು ಹೇಳಿದರು.
ಸರ್ಕಾರದ ಅನುದಾನ ಹಂತಹಂತವಾಗಿ ಕ್ಷೇತ್ರಕ್ಕೆ ಬಳಕೆ: ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ರಾಜಾರಾಮ್ ಕೆ.ಬಿ.ಅವರು ಮಾತನಾಡಿ, ಶಾಸಕರ ಮತ್ತು ಸಹಾಯಕ ಕಮಿಷನರ್ ನೇತೃತ್ವದಲ್ಲಿ, ಸರಕಾರದ ಹಂತದಲ್ಲಿ ರೂ.2 ಕೋಟಿ ಹಣ ಮೀಸಲಿಡಲಾಗಿದೆ. ಆ ಅನುದಾನವನ್ನು ಹಂತ ಹಂತವಾಗಿ ಕ್ಷೇತ್ರಕ್ಕೆ ಬಳಕೆ ಮಾಡಲಾಗುವುದು ಎಂದು ಹೇಳಿದರು. ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿಯ ಗೌರವಾಧ್ಯಕ್ಷ ಪೀತಾಂಬರ ಹೆರಾಜೆ, ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಉಪಾಧ್ಯಕ್ಷ ದೀಪಕ್ ಕೋಟ್ಯಾನ್, ನಾರಾಯಣ ಮಚ್ಚಿಮಲೆ, ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಅಭಿವೃದ್ದಿ ಟ್ರಸ್ಟ್‌ನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

























