ಪುತ್ತೂರು: ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೋರ್ವರು ಕಾಣೆಯಾದ ಪ್ರಕರಣ ದಾಖಲಾಗಿದೆ.
ಕೆಯ್ಯೂರು ಗ್ರಾಮದ ಮಾಡಾವು ಉದ್ದೋಲೆ ನಿವಾಸಿ ದೀಕ್ಷಿತ್ ಕೆ.ಜೆ (36) ಅವರು ನವೆಂಬರ್ 30ರಿಂದ ಕಾಣೆಯಾಗಿರುವ ಮಾಹಿತಿ ಅವರ ಪತ್ನಿ ಗಾಯತ್ರಿ ಅವರು ನೀಡಿದ್ದಾರೆ.
ದೀಕ್ಷಿತ್ ಅವರು ಗ್ರಾಫಿಕ್ ಡಿಸೈನರ್ ಆಗಿದ್ದು, ಕಳೆದ ಸುಮಾರು ಒಂದು ತಿಂಗಳಿನಿಂದ ಪತ್ನಿಯ ತಾಯಿಯ ಮನೆಯಲ್ಲಿ ವಾಸವಾಗಿದ್ದರು. ನವೆಂಬರ್ 30ರಂದು ಮಧ್ಯಾಹ್ನ 2.30ಕ್ಕೆ ಮೈಸೂರು ಮುಖಾಂತರ ಬೆಂಗಳೂರಿಗೆ ತಮ್ಮ ಮೋಟಾರ್ ಸೈಕಲ್ (KA19 EH 1532) ನಲ್ಲಿ ಪ್ರಯಾಣ ಆರಂಭಿಸಿದ್ದರು.
ಮೈಸೂರು ತಲುಪಿದ ನಂತರ, ಡಿಸೆಂಬರ್ 2ರಂದು ರಾಮನಗರಕ್ಕೆ ಬಂದಿರುವ ಬಗ್ಗೆ ಅವರು ಕುಟುಂಬಕ್ಕೆ ತಿಳಿಸಿದ್ದರು. ಡಿಸೆಂಬರ್ 3ರ ರಾತ್ರಿ 12 ಗಂಟೆಗೆ ಪತ್ನಿಗೆ ಕರೆ ಮಾಡಿ “ಬೆಂಗಳೂರು ತಲುಪಿದ್ದೇನೆ, ಮೊಬೈಲ್ ಚಾರ್ಜ್ ಕಡಿಮೆ ಇದೆ, ಆರೋಗ್ಯ ಸ್ವಲ್ಪ ಸರಿಯಿಲ್ಲ, ಮತ್ತೆ ಕರೆ ಮಾಡುತ್ತೇನೆ” ಎಂದು ತಿಳಿಸಿದ್ದಾರೆ. ನಂತರದಿಂದ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಸ್ನೇಹಿತರ ವಿಚಾರಣೆಗಳಲ್ಲೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಹೇಳಲಾಗಿದೆ.
ಕಾಣೆಯಾದವರ ವಿವರಣೆ:
ಹೆಸರು: ದೀಕ್ಷಿತ್ ಕೆ.ಜೆ
ವಯಸ್ಸು: 36
ದೇಹದ ವೈಶಿಷ್ಟ್ಯಗಳು: ದೃಢಕಾಯ, ದುಂಡು ಮುಖ, ಗುಂಗುರು ಕೂದಲು, ಕುರುಚಲು ಗಡ್ಡ ಹಾಗೂ ಮೀಸೆ
ಧರಿಸಿದ್ದ ಬಟ್ಟೆಗಳು: ತಿಳಿ ಹಸಿರು ಹಾಗೂ ಕೇಸರಿ ಬಣ್ಣದ ಟೀ ಶರ್ಟ್, ಸಾದಾ ಪ್ಯಾಂಟ್
ಭಾಷೆ: ಕನ್ನಡ, ತುಳು
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರಂ: 137/2025 ರಂತೆ ಪ್ರಕರಣ ದಾಖಲಾಗಿದ್ದು, ದೀಕ್ಷಿತ್ ಅವರನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.



























