ಉಪ್ಪಿನಂಗಡಿ: ಕರಾಯ ಗ್ರಾಮದ ಕಲ್ಲೇರಿ ಸಮೀಪದ ಹೆಚ್.ಪಿ ಕಂಪೆನಿಯ ಇಂದಿರಾ ಅಟೋ ಫ್ಯೂಯೆಲ್ಸ್ ಪೆಟ್ರೋಲ್ ಪಂಪ್ ಬಳಿ ಒಬ್ಬ ಅಪರಿಚಿತ ವ್ಯಕ್ತಿ ಕುಸಿದು ಮೃತಪಟ್ಟ ಪ್ರಕರಣ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಈ ಸಂಬಂಧ ಯುಡಿಆರ್ ಸಂಖ್ಯೆ 59/2025, ಕಲಂ 194 BNSS ಅಡಿ ಪ್ರಕರಣ ದಾಖಲಿಸಲಾಗಿದೆ.
ರಾಧಾಕೃಷ್ಣ ನಾಯಕ್ (33) ಅವರು ನೀಡಿದ ಮಾಹಿತಿಯಂತೆ, ದಿನಾಂಕ 07-12-2025 ಬೆಳಿಗ್ಗೆ 06.00 ಗಂಟೆಗೆ ಕಛೇರಿ ತೆರೆಯಲು ಬಂದಾಗ ಸುಮಾರು 60–65 ವರ್ಷ ಪ್ರಾಯದ ಒಬ್ಬ ಅಪರಿಚಿತ ವ್ಯಕ್ತಿ ಪೆಟ್ರೋಲ್ ಪಂಪ್ ಮುಂಭಾಗ ನಿಂತುಕೊಂಡು ತೂರಾಡುತ್ತಿದ್ದುದನ್ನು ಗಮನಿಸಲಾಗಿದೆ.
ಅವರ ದೇಹದಲ್ಲಿ ಅಂಗಿ ಇರಲಿಲ್ಲ; ಕಪ್ಪು ಚಡ್ಡಿ, ಹೆಗಲಿನಲ್ಲಿ ಕೇಸರಿ ಶಾಲು ಧರಿಸಿದ್ದರು. ಎಡ ಕೈ ರಟ್ಟೆಯಲ್ಲಿ ಮತ್ತು ಕೈಗಂಟಿನಲ್ಲಿ ಬಾವುಕೊಂಡಿದ್ದು, ಅವರು ಯಾವುದೋ ಅಮಲು ಪದಾರ್ಥ ಸೇವಿಸಿದಂತೆ ವರ್ತಿಸುತ್ತಿದ್ದರು.
ಅವರನ್ನು ವಿಚಾರಿಸಿದಾಗ, ಅವರು ತುಳು ಭಾಷೆಯಲ್ಲಿ “ಸ್ವಲ್ಪ ಹೊತ್ತಿನ ಬಳಿಕ ಹೋಗುತ್ತೇನೆ” ಎಂದು ನಿಧಾನವಾಗಿ ಪ್ರತಿಕ್ರಿಯಿಸಿದ್ದರು. ಅನಂತರ ಸ್ವಲ್ಪ ಹೊತ್ತಿನಲ್ಲಿ ಸ್ಥಳದಲ್ಲೇ ಕುಸಿದು ಬಿದ್ದರು. ಮರು ವಿಚಾರಣೆಗೆ ಪ್ರತಿಕ್ರಿಯಿಸದೇ ಇದ್ದ ಕಾರಣ, ತಕ್ಷಣ 108 ಅಂಬ್ಯುಲೆನ್ಸ್ ಕರೆಸಿ, ಬೆಳಿಗ್ಗೆ 09.30ಕ್ಕೆ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಯಿತು.
ವೈದ್ಯರ ಪರೀಕ್ಷೆಯಲ್ಲಿ ಅವರು ಮೃತಪಟ್ಟಿರುವುದು ದೃಢಪಟ್ಟಿತು.
ಪೆಟ್ರೋಲ್ ಪಂಪ್ ಸಿಬ್ಬಂದಿ ಹಾಗೂ ಸ್ಥಳೀಯರಿಂದ ವಿಚಾರಿಸಿದರೂ ಆ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಅನಾರೋಗ್ಯ ಅಥವಾ ಅತಿಯಾದ ಮದ್ಯಪಾನದ ಪರಿಣಾಮವಾಗಿ ಸಾವನ್ನಪ್ಪಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ತಿಳಿಸಿದರು.
ವಾರೀಸುದಾರರ ಪತ್ತೆ ಮತ್ತು ಕಾನೂನು ಕ್ರಮಕ್ಕಾಗಿ ಮುಂದಿನ ತನಿಖೆ ಪ್ರಗತಿಯಲ್ಲಿದೆ.



























