ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಬೆಳೆಗಾರರಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಬಿಡುಗಡೆಯಾಗಿದೆ. ಕೇಂದ್ರ ಸರ್ಕಾರದಿಂದ ಕೃಷಿಕರಿಗೆ ಅನುಕೂಲವಾಗಲೆಂದು ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಮಿಸಿರುವ ಯೋಜನೆ ಇದಾಗಿದೆ. ಈ ಯೋಜನೆಯ ಪ್ರಕಾರ ರೈತರು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಬೆಳೆ ವಿಮೆಯನ್ನು ಪಾವತಿ ಮಾಡಬೇಕು. ಬೆಳೆ ವಿಮೆಯ ಅವಧಿ ಮುಗಿದ ಬಳಿಕ ಆ ವರ್ಷದ ಹವಾಮಾನವನ್ನು ಗಮನಿಸಿಕೊಂಡು ನಿಯಮದ ಪ್ರಕಾರ ವಿಮಾ ಹಣವನ್ನು ರೈತರ ಖಾತೆ ವಿಮಾ ಕಂಪನಿಯು ಬಿಡುಗಡೆ ಮಾಡುತ್ತದೆ. ಕಳೆದ ಕೆಲವು ವರ್ಷಗಳಿಂದ ಈ ಯೋಜನೆ ಸರಿಯಾಗಿಯೇ ಜಾರಿಯಾಗಿದೆ. ಈ ಜಾರಿ ಕೆಲವು ಪ್ರದೇಶಗಳಲ್ಲಿ ಅಡಿಕೆ ಬೆಳೆಗಾರರಿಗೆ ಪ್ರಯೋಜನಕ್ಕೆ ಬಂದಿಲ್ಲ.
ಹವಾಮಾನ ಆಧಾರಿತ ಬೆಳೆ ವಿಮೆ ಇದಾದ್ದರಿಂದ ಹವಾಮಾನ ದಾಖಲು ಕೂಡಾ ಅಗತ್ಯವಾಗಿದೆ. ಇದಕ್ಕಾಗಿ ಪ್ರತೀ ಗ್ರಾಮಗಳಿಂದ ಮಳೆ ಹಾಗೂ ತಾಪಮಾನದ ದಾಖಲೆಗಳನ್ನು ಇಲಾಖೆಗಳ ಮೂಲಕ ಪಡೆಯಲಾಗುತ್ತದೆ. ಆದರೆ ಈ ಬಾರಿ ಪುತ್ತೂರಿನಲ್ಲಿ ಉತ್ತಮ ಮಳೆಯಾಗಿದೆ. ಕಳೆದ ವರ್ಷದಿಂದ ಈ ವಿಮಾ ಅವಧಿಯ ಒಳಗೆ ಕೂಡಾ ಮಳೆಯಾಗಿದೆ, ಅಡಿಕೆ ಬೆಳೆ ನಷ್ಟವಾಗಿದೆ. ಕೊಳೆರೋಗ ಬಾಧಿಸಿದೆ. ತಾಪಮಾನಿಂದಲೂ ಅಡಿಕೆ ಉದುರಿದೆ. ಹೀಗಿದ್ದರೂ ಈಗ ಬೆಳೆ ವಿಮೆಯನ್ನು ಗಮನಿಸಿದರೆ ರೈತರು ಕಟ್ಟಿದ ಪ್ರೀಮಿಯಂನಷ್ಟೇ ಕೆಲವು ರೈತರಿಗೆ ಬಂದಿದೆ. ಹೀಗಾಗಿ ಸಂಕಷ್ಟಕ್ಕೆ ಒಳಗಾಗಿದ್ದ ಅಡಿಕೆ ಬೆಳೆಗಾರರಿಗೆ ಈ ಯೋಜನೆ ಕೂಡಾ ನೆರವಿಗೆ ಬಂದಂತೆ ಆಗಿಲ್ಲ. ಕೇಂದ್ರ ಸರ್ಕಾರದ, ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಯೋಜನೆ ಅಡಿಕೆ ಬೆಳೆಗಾರರಿಗೆ ಈ ಬಾರಿ ಸರಿಯಾಗಿ ತಲುಪಿಲ್ಲ. ಇದಕ್ಕೆ ಕಾರಣ ಗ್ರಾಮಗಳಲ್ಲಿ ಇರುವ ಮಳೆ ಮಾಪಕ ಹಾಗೂ ಹವಾಮಾನ ದಾಖಲು ಮಾಡುವ ಯಂತ್ರಗಳು. ಈ ಯಂತ್ರಗಳು ಅನೇಕ ಕಡೆಗಳಲ್ಲಿ ಸುಸ್ಥಿತಿಯಲ್ಲಿ ಇಲ್ಲ ಎಂದು ಪಂಚಾಯತ್ ಮಟ್ಟದಲ್ಲಿ ಕೆಲವು ಸಿಬಂದಿಗಳು ಹೇಳುತ್ತಾರೆ. ಹೀಗಾಗಿ ತಕ್ಷಣವೇ ಈ ಯಂತ್ರಗಳ ಸ್ಥಿತಿಯ ಬಗ್ಗೆ ಸರಿಯಾದ ತಪಾಸಣೆಯಾಗಬೇಕು ಹಾಗೂ ತಕ್ಷಣವೇ ದುರಸ್ತಿ ಮಾಡುವ ಕೆಲಸ ಆಗಬೇಕು. ಈ ಬಾರಿಯ ಆಗಿರುವ ಎಡವಟ್ಟುಗಳಿಗೆ ಖಾಸಗಿಯವರಿಂದ ಅಥವಾ ಕೃಷಿಕರಿಂದ ಮಳೆ ಹಾಗೂ ತಾಪಮಾನದ ದಾಖಲೆಗಳನ್ನು ಪಡೆದು ಸೂಕ್ತ ರೀತಿಯಲ್ಲಿ ವಿಮಾ ಹಣ ವಿತರಣೆಯಾಗಬೇಕು, ಪುತ್ತೂರು ತಾಲೂಕಿನ ಹಾಗೂ ಜಿಲ್ಲೆಯ ಎಲ್ಲಾ ಅಡಿಕೆ ಬೆಳೆಗಾರರಿಗೆ ಈಗಾಗಲೇ ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ಸಿಗಬೇಕು.




























