ಮಾಣಿಲ ಗ್ರಾಮದ ಸ್ವರ್ಣ ಸಭಾಭವನದಲ್ಲಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಭವ್ಯವಾಗಿ ಜರುಗಿತು. ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದ ಅಳಿಕೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕಾನ ಈಶ್ವರ ಭಟ್ ಅವರು ಮಾತನಾಡಿ, “ವಾಜಪೇಯಿಯವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಮಾಣಿಕ ಸ್ವಯಂಸೇವಕ ಮಾತ್ರವಲ್ಲ, ವಾಗ್ಮಿ, ಕವಿ, ಪತ್ರಕರ್ತ ಹಾಗೂ ಅಪಾರ ಜನಪ್ರೀತಿಯನ್ನು ಗಳಿಸಿದ ಸಂಸದೀಯ ಪಟು. ಸುಮಾರು 48 ವರ್ಷಗಳ ಜನಪ್ರತಿನಿಧಿಯಾಗಿ ಅವರು ಸ್ವಚ್ಛ, ಸ್ವಾರ್ಥರಹಿತ, ಭ್ರಷ್ಟಾಚಾರರಹಿತ ರಾಜಕೀಯದ ಮಾದರಿ ಸ್ಥಾಪಿಸಿದ್ದಾರೆ. ಈಗಿನ ಜನಪ್ರತಿನಿಧಿಗಳು ಅವರ ವ್ಯಕ್ತಿತ್ವದಿಂದ ಕಲಿಯಬೇಕಾದ್ದು ಬಹಳಷ್ಟು ಇದೆ”ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಕ್ಕಳ ಸಾಹಿತಿ ಸವಿತಾ ಎಸ್. ಭಟ್ ಹಾಗೂ ಮಾಜಿ ಮಂಡಲ ಪ್ರಧಾನ ಮರುವ ಮಹಾಬಲ ಭಟ್ ಉಪಸ್ಥಿತರಿದ್ದು ವಾಜಪೇಯಿಯವರ ಜೀವನ ಮೌಲ್ಯಗಳ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು. ಅನಂತರಾಮ ಭಟ್ ಪಳನೀರು ವೇದಿಕೆಯಲ್ಲಿದ್ದರು.
ಗಣೇಶ ಕುಮಾರ್ ದೇಲಂತಮಜಲು ಅತಿಥಿಗಳನ್ನು ಸ್ವಾಗತಿಸಿದರು. ಎಸ್. ನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷ್ಣಾನಂದ ಮಾಣಿಮೂಲೆ ಕೃತಜ್ಞತೆ ಸಲ್ಲಿಸಿದರು. ಯಶ್ವಿತಾ ಎಸ್. ಕಾರ್ಯಕ್ರಮವನ್ನು ನಿರ್ವಹಿಸಿದರು.




























