ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮುಕ್ಕ ಪ್ರದೇಶದಲ್ಲಿ 85 ವರ್ಷದ ವೃದ್ಧೆಯ ಮನೆಯಲ್ಲಿ ನಡೆದ ಭೀಕರ ದರೋಡೆ ಪ್ರಕರಣವನ್ನು ಸುರತ್ಕಲ್ ಪೊಲೀಸರು ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿ ಸುಮಾರು 4.43 ಲಕ್ಷ ರೂ. ಮೌಲ್ಯದ ಕಳವು ಮಾಡಿದ ಚಿನ್ನ, ಮೋಟಾರ್ ಸೈಕಲ್, ಮೊಬೈಲ್ ಫೋನ್‌ಗಳು ಹಾಗೂ ನಗದು ಹಣವನ್ನು ವಶಕ್ಕೆ ಪಡೆದಿದ್ದಾರೆ.
ಮುಕ್ಕ, ಸಸಿಹಿತ್ಲು ರಸ್ತೆಯ ಜಯಲಕ್ಷ್ಮೀ ನಿವಾಸದಲ್ಲಿ ವಾಸವಾಗಿರುವ ಶ್ರೀಮತಿ ಜಲಜ (85) ಎಂಬವರ ಮನೆಯಲ್ಲಿ ದಿನಾಂಕ 03-12-2025 ರಂದು ಮಧ್ಯಾಹ್ನ ಸುಮಾರು 2.30 ಗಂಟೆಗೆ ಅಪರಿಚಿತರು ಕುಡಿಯಲು ನೀರು ಕೇಳುವ ನೆಪದಲ್ಲಿ ಮನೆ ಬಾಗಿಲು ಬಡಿದಿದ್ದಾರೆ. ಬಾಗಿಲು ತೆಗೆಯದ ಕಾರಣ ಮನೆಯ ಹಂಚನ್ನು ತೆಗಿದು ಒಳನುಗ್ಗಿದ ಆರೋಪಿಗಳು, ತುಳುವಿನಲ್ಲಿ ಜೀವ ಬೆದರಿಕೆ ಹಾಕಿ ಗೋಡ್ರೇಜ್‌ನಲ್ಲಿದ್ದ ಸುಮಾರು 16 ಗ್ರಾಂ ಚಿನ್ನದ ಸರ, 20 ಗ್ರಾಂ ತೂಕದ ಎರಡು ಚಿನ್ನದ ಬಳೆಗಳು ಹಾಗೂ ಪರ್ಸ್‌ನಲ್ಲಿದ್ದ ಸುಮಾರು 14,000 ರೂ. ನಗದು ಹಣವನ್ನು ದೋಚಿ ಪರಾರಿಯಾಗಿದ್ದರು.
ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 158/2025 ಕಲಂ 309(6) ಬಿ.ಎನ್.ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಪಿಎಸ್‌ಐ ರಘುನಾಯಕ್ ಮತ್ತು ರಾಘವೇಂದ್ರ ನಾಯ್ಕ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಲಾಗಿತ್ತು.
ತನಿಖೆಯ ವೇಳೆ ಶೈನ್ ಎಚ್. ಪುತ್ರನ್ @ ಶಯನ್ @ ಶೈನ್ (21) ಎಂಬಾತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಈ ದರೋಡೆ ಕೃತ್ಯವನ್ನು ಜೈಸನ್ @ ಲೆನ್ಸನ್ ಕಾರ್ಕಳನೊಂದಿಗೆ ನಡೆಸಿರುವುದಾಗಿ ಹಾಗೂ ಕಳವಾದ ಚಿನ್ನವನ್ನು ಬೆಂಗಳೂರಿನಲ್ಲಿ ಗಿರೀಶ್ ಮತ್ತು ವಿನೋದ್ ಕುಮಾರ್ ಎಂಬವರಿಗೆ ಮಾರಾಟ ಮಾಡಿರುವುದಾಗಿ ಬಾಯ್ಬಿಟ್ಟಿದ್ದಾನೆ.
ಪೊಲೀಸರು ಬೆಂಗಳೂರು ತೆರಳಿ ದಿನಾಂಕ 14-12-2025 ರಂದು ವಿನೋದ್ @ ಕೋತಿ @ ವಿನೋದ್ ಕುಮಾರ್ (33) ಮತ್ತು ಗಿರೀಶ್ @ ಸೈಕಲ್ ಗಿರಿ (28) ಎಂಬ ಆರೋಪಿಗಳನ್ನು ಬಂಧಿಸಿ, ಅವರಿಂದ ಕಳವು ಮಾಡಿದ 4.43 ಲಕ್ಷ ರೂ. ಮೌಲ್ಯದ ಚಿನ್ನ, ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್, ಮೂರು ಮೊಬೈಲ್ ಫೋನ್‌ಗಳು ಹಾಗೂ 3,000 ರೂ. ನಗದನ್ನು ಮಹಜರ್ ಮೂಲಕ ವಶಕ್ಕೆ ಪಡೆದಿದ್ದಾರೆ.
ಇನ್ನೊಬ್ಬ ಆರೋಪಿಯಾದ ಜೈಸನ್ @ ಲೆನ್ಸನ್ ಕಾರ್ಕಳ ಎಂಬಾತನು ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಬಂಧಿತ ಆರೋಪಿಗಳ ಪೈಕಿ ಶೈನ್ ಎಚ್. ಪುತ್ರನ್ ಮೇಲೆ ಸುರತ್ಕಲ್ ಠಾಣೆಯಲ್ಲಿ ಗಾಂಜಾ ಸೇವನೆ ಪ್ರಕರಣ ದಾಖಲಾಗಿದ್ದು, ವಿನೋದ್ ಕುಮಾರ್ ಮತ್ತು ಗಿರೀಶ್ ವಿರುದ್ಧ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಕೊಲೆ, ಕೊಲೆಯತ್ನ, ದರೋಡೆ ಸೇರಿದಂತೆ ಅನೇಕ ಗಂಭೀರ ಪ್ರಕರಣಗಳು ದಾಖಲಾಗಿವೆ.
ಆರೋಪಿಗಳನ್ನು ದಿನಾಂಕ 15-12-2025 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಈ ಯಶಸ್ವಿ ಕಾರ್ಯಾಚರಣೆಯನ್ನು ಮಾನ್ಯ ಸಹಾಯಕ ಪೊಲೀಸ್ ಆಯುಕ್ತರು (ಉತ್ತರ ಉಪವಿಭಾಗ) ಶ್ರೀ ಶ್ರೀಕಾಂತ್ ಕೆ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಪಿ ಅವರ ನೇತೃತ್ವದಲ್ಲಿ ಪಿಎಸ್‌ಐಗಳು, ಎಎಸ್‌ಐಗಳು ಹಾಗೂ ಸುರತ್ಕಲ್ ಠಾಣೆಯ ಸಿಬ್ಬಂದಿಗಳು ನಡೆಸಿದ್ದಾರೆ.

























