ಉಪ್ಪಿನಂಗಡಿ: ಇಲ್ಲಿನ ಉಬಾರ್ ಸ್ಪೋರ್ಟಿಂಗ್ ಕ್ಲಬ್ ಆಯೋಜಿಸಿದ ಉಬಾರ್ ಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಅಂಪೈರ್ ನೀಡಿದ ತೀರ್ಪಿಗೆ ಅಸಮಾಧಾನಗೊಂಡ ಪ್ರೇಕ್ಷಕರಿಬ್ಬರು ಏಕಾಏಕಿ ಮೈದಾನಕ್ಕೆ ನುಗ್ಗಿ ಹಲ್ಲೆಗೆ ಮುಂದಾದ ಘಟನೆ ನಡೆದಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಇವರ ಕೃತ್ಯಕ್ಕೆ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಹಲ್ಲೆಗೆ ಮುಂದಾದ ಯುವಕರು ಅಂಪೈರ್ ಅವರ ಬಳಿಕ ಕ್ಷಮೆ ಕೇಳುವ ಮೂಲಕ ಈ ಪ್ರಕರಣ ಸುಖಾಂತ್ಯಗೊಂಡಿದೆ.
ಉಬಾರ್ ಸ್ಪೋರ್ಟಿಂಗ್ ಕ್ಲಬ್ ಉಪ್ಪಿನಂಗಡಿಯಲ್ಲಿ ಅದ್ದೂರಿಯಾಗಿ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಪಂದ್ಯಾಟವನ್ನು ಆಯೋಜಿಸಿತ್ತು. ರಾತ್ರಿ ಕಾನಾ’ ಮತ್ತು ಕೆಜಿಎಫ್’ ತಂಡಗಳ ಮಧ್ಯೆ ರೋಚಕ ಸೆಮಿ ಫೈನಲ್ ನಡೆಯುತ್ತಿದ್ದ ಸಂದರ್ಭ ಬ್ಯಾಟ್ಸ್‌ಮೆನ್ ಒಬ್ಬರಿಗೆ ಅಂಪೈರ್ ರೋಲನ್ ಪಿಂಟೋ ಅವರು ಎಲ್‌ಬಿಡಬ್ಲ್ಯೂ ಔಟ್ ತೀರ್ಪು ನೀಡಿದ್ದರು.
ಆದರೆ ಈ ತೀರ್ಪಿಗೆ ಅಸಮಾಧಾನಗೊಂಡ ಜಸ್ಟೀನ್ ಹಾಗೂ ಶರೀಫ್ ಅವರು ಏಕಾಏಕಿ ಪ್ರೇಕ್ಷಕರ ಗ್ಯಾಲರಿಯಿಂದ ಮೈದಾನಕ್ಕೆ ನುಗ್ಗಿ ಅಂಪೈರ್ ಮೇಲೆ ಹಲ್ಲೆಗೆ ಮುಂದಾಗಿದ್ದರು.
ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿತ್ತು. ಕ್ರೀಡಾ ಸ್ಫೂರ್ತಿ ಮರೆತು ಈ ರೀತಿ ಮಾಡಿರುವ ಇವರ ಈ ಕೃತ್ಯಕ್ಕೆ ಕ್ರೀಡಾಭಿಮಾನಿಗಳಿಂದ ಆಕ್ರೋಶವೂ ವ್ಯಕ್ತವಾಗಿತ್ತು.
ಅಲ್ಲದೇ, ಈ ಬಗ್ಗೆ ರೋಲನ್ ಪಿಂಟೋ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದರ ಬೆನ್ನಲ್ಲೇ ಜಸ್ಟಿನ್ ಹಾಗೂ ಶರೀಫ್ ಅವರು ಉಬಾರ್ ಸ್ಪೋರ್ಟಿಂಗ್ ಕ್ಲಬ್‌ನವರ, ರೋಲನ್ ಪಿಂಟೋ ಅವರ ಅಭಿಮಾನಿಗಳ ಸಮಕ್ಷಮ ರೋಲನ್ ಪಿಂಟೋ ಅವರಲ್ಲಿ ಕ್ಷಮೆ ಕೇಳಿದರಲ್ಲದೇ, ಕ್ರೀಡಾ ಹುಮ್ಮಸ್ಸಿನಿಂದ ಉದ್ವೇಗಕ್ಕೆ ಒಳಗಾಗಿ ನಾವು ಈ ರೀತಿ ಮಾಡಿದ್ದೇವೆ. ಇನ್ನು ಮುಂದೆ ಇಂತಹ ತಪ್ಪು ಮಾಡುವುದಿಲ್ಲ ಎಂದು ತಿಳಿಸಿದರು. ಈ ಮೂಲಕ ಈ ಪ್ರಕರಣವು ಸುಖಾಂತ್ಯವಾಗಿ ಬಗೆಹರಿಯಿತು.

























