ಧಾರವಾಡ: ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡದ ಕ್ಯಾರಕೊಪ್ಪ ರೈಲ್ವೆ ಗೇಟ್ ಬಳಿ ನಡೆದಿದೆ. ಬಳ್ಳಾರಿ ಮೂಲದ ಪಲ್ಲವಿ(24) ಆತ್ಮಹತ್ಯೆಗೆ ಶರಣಾದ ಯುವತಿಯಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆಗಾಗಿ ಧಾರವಾಡಕ್ಕೆ ಬಂದಿದ್ದಳು ಎನ್ನಲಾಗಿದೆ.
ಯುವತಿಯ ಸಾವಿನ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆ ಪರೀಕ್ಷಿಸಿದಾಗ ಆಕೆಯ ಪ್ಯಾಂಟ್ ಕಿಸೆಯಲ್ಲಿ ಡೆತ್ನೋಟ್ ಪತ್ತೆಯಾಗಿದೆ.
ಮೃತ ಪಲ್ಲವಿಯ ಪ್ಯಾಂಟ್ ಕಿಸೆಯಲ್ಲಿ ಎರಡು ಪುಟಗಳ ಡೆತ್ನೋಟ್ ಪತ್ತೆಯಾಗಿದ್ದು, ಅದರಲ್ಲಿ ತಂದೆ-ತಾಯಿ ಬಗ್ಗೆ ಆಕೆ ಅಸಮಾಧಾನ ವ್ಯಕ್ತಪಡಿಸಿದ್ದಾಳೆ. ನನಗೆ ಯಾವತ್ತೂ ನೀವು ಪ್ರೀತಿ ನೀಡಿಲ್ಲ. ಹಾಸ್ಟೆಲ್ನಲ್ಲೇ ನನ್ನ ಬೆಳೆಸಿದ್ದೀರಿ. ನನ್ನ ಬೇಕು ಮತ್ತು ಬೇಡಗಳನ್ನು ನೀವು ಕೇಳದ ಕಾರಣ ನಾನು ನೋವುಂಡಿದ್ದೇನೆ ಎಂದು ಬರೆದಿರೋದು ಕಂಡುಬಂದಿದೆ.
ಮತ್ತೊಂದು ಡೆತ್ನೋಟ್ ಆಕೆಯ ರೂಮಿನಲ್ಲಿ ಸಿಕ್ಕಿದ್ದು, ಅದರಲ್ಲಿ ಪ್ರೀತಿಸುತ್ತಿದ್ದ ಯುವಕನ ಬಳಿ ಪಲ್ಲವಿ ಕ್ಷಮೆ ಕೇಳಿದ್ದಾಳೆ. ನಮ್ಮವರು ನಿನ್ನೊಡನೆ ಬದುಕಲು ಅವಕಾಶ ಕೊಡಲಿಲ್ಲ. ಇದರಿಂದಾಗಿ ನನ್ನ ಮನಸ್ಸಿಗೆ ನೋವಾಗಿದೆ. ನನ್ನನ್ನು ನೀನು ಕ್ಷಮಿಸು, ಈ ನನ್ನ ಸಾವಿಗೆ ನಾನೇ ಕಾರಣ ಎಂದು ಪಲ್ಲವಿ ಸ್ಪಷ್ಟವಾಗಿ ತಿಳಿಸಿದ್ದಾಳೆ.
ಪಲ್ಲವಿ ಮತ್ತು ಬಳ್ಳಾರಿ ತಾಲೂಕಿನ ದಮ್ಮೂರು ಕಗ್ಗಲ್ಲು ಗ್ರಾಮದ ನಿವಾಸಿ ಯುವಕ ಪ್ರೀತಿಸುತ್ತಿದ್ದರು. ಈ ವಿಷಯವನ್ನು ಪಲ್ಲವಿ ಮನೆಯಲ್ಲೂ ಇವರು ಪ್ರಸ್ತಾಪಿಸಿದ್ದು, ಆ ವೇಳೆ ಕುಟುಂಬ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೆ, ತಾಯಿಯ ಸಂಬಂಧಿಕರೊಬ್ಬರ ಜೊತೆ ಪಲ್ಲವಿಯ ಮದುವೆ ನಿಶ್ಚಯ ಕೂಡ ಮಾಡಲಾಗಿತ್ತು. ಹೀಗಾಗಿ ಆಕೆ ಬಹಳ ನೊಂದಿದ್ದಳು ಎಂಬ ವಿಷಯ ಕೂಡ ತನಿಖೆ ವೇಳೆ ಗೊತ್ತಾಗಿದೆ.

























