ಪುತ್ತೂರು: ಸುದಾನ ಪದವಿಪೂರ್ವ ಕಾಲೇಜಿನ 2025–26ನೇ ಸಾಲಿನ ವಾರ್ಷಿಕ ಕ್ರೀಡಾಕೂಟವು ಸಂಸ್ಥೆಯ ಮೈದಾನದಲ್ಲಿ ನಡೆಯಿತು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಸಂತೋಷ್ ಭಂಡಾರಿ ಅವರು ಭಾಗವಹಿಸಿ, ಕ್ರೀಡೆಗಳು ವಿದ್ಯಾರ್ಥಿಗಳ ಶಾರೀರಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಅವಿಭಾಜ್ಯ ಅಂಗವಾಗಿದ್ದು, ಶಿಸ್ತು, ಸಹಕಾರ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುತ್ತವೆ ಎಂದು ತಮ್ಮ ಸಂದೇಶದಲ್ಲಿ ಹೇಳಿದರು. ಹಾಗೆಯೇ ಸಂಸ್ಥೆಯ ಏಳಿಗೆಯಲ್ಲಿ ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕವಾಗಿ ಮಾತ್ರವಲ್ಲ ಆಟೋಟಗಳಲ್ಲಿಯೂ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡು ಸಂಸ್ಥೆಯ ಹಿರಿಮೆಯನ್ನು ರಾಜ್ಯಮಟ್ಟದಲ್ಲಿಯೂ ಕೂಡ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಇದು ಈ ಸಂಸ್ಥೆಗೆ ಹೆಮ್ಮೆ ತರುವಂತಹ ವಿಚಾರ. ಅಂತೆಯೇ ಸಂಸ್ಥೆಯಲ್ಲಿರುವ ಶೇಕಡ 90 ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದವರಾಗಿದ್ದು, ಮುಂದಿನ ಸಮಯಗಳಲ್ಲಿ ಈ ಸಂಸ್ಥೆಯ ಹಿರಿಮೆಯನ್ನು ಎತ್ತಿ ಹಿಡಿಯುವಲ್ಲಿ ಶ್ರಮವಹಿಸಲಿದ್ದಾರೆ ಎಂದರು. ಶೈಕ್ಷಣಿಕವಾಗಿ ಇಡೀ ರಾಜ್ಯವೇ ಸುದಾನ ಪದವಿಪೂರ್ವ ಕಾಲೇಜನ್ನು ಗಮನಿಸುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸುಪ್ರೀತ್ ಕೆ.ಸಿ ಅವರು ಮಾತನಾಡಿ, ಪಠ್ಯಾಭ್ಯಾಸದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಸಮಾರಂಭದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾದ ನವೀನ್, ಪುಷ್ಪರಾಜ್, ಲೀಲಾವತಿ ಹಾಗೂ ಜೀವಿತಾ ಅವರು ಉಪಸ್ಥಿತರಿದ್ದು, ಕ್ರೀಡಾಕೂಟದ ಯಶಸ್ವಿ ಆಯೋಜನೆಗೆ ಮಾರ್ಗದರ್ಶನ ನೀಡಿದರು. ಪ್ರಥಮ ವಿಜ್ಞಾನ ಪಿಸಿಎಂಬಿ ವಿಭಾಗದ ವಿದ್ಯಾರ್ಥಿನಿ ಖದೀಜತ್ ಆಫ್ನ ಕಾರ್ಯಕ್ರಮವನ್ನು ನಿರೂಪಿಸಿ, ಅನಿಖಾ ಯು. ಅವರು ವಂದಿಸಿದರು. ಸಮಾರೋಪ ಸಮಾರಂಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸುಪ್ರೀತ್ ಕೆ ಸಿ ಅವರ ಜೊತೆ ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕರಾದ ನವೀನ್ ಪುಷ್ಪರಾಜ್ ಜೀವಿತ ಮತ್ತು ಲೀಲಾವತಿ ಯವರು ಉಪಸ್ಥಿತರಿದ್ದು, ವಿಜೇತ ವಿದ್ಯಾರ್ಥಿಗಳಿಗೆ ಮತ್ತು ತಂಡಗಳಿಗೆ ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು.
ಈ ಸಮಾರಂಭದಲ್ಲಿ ಕಾಲೇಜಿನ ಆಂಗ್ಲ ಮಾಧ್ಯಮ ವಿಭಾಗದ ಉಪನ್ಯಾಸಕಿ ಕುಮಾರಿ ಮೆಲಿಷಾ ಪ್ರಿಯಾ ಡಿಸೋಜಾ ಅವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ಕಾಲೇಜಿನ ಭೌತಶಾಸ್ತ್ರ ವಿಭಾಗದ ಉಪನ್ಯಾಸಕರಾದ ಯತೀಶ್ ಕುಮಾರ್ ಅವರು ಕ್ರೀಡಾಸ್ಪರ್ಧಿಗಳನ್ನು ಆಯೋಜಿಸಿ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು.ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ, ಪೋಷಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡಾಕೂಟಕ್ಕೆ ಶೋಭೆ ತಂದರು. ಸಮಾರಂಭವು ಶಿಸ್ತಿನಿಂದ ಹಾಗೂ ಉತ್ಸಾಹದಿಂದ ಯಶಸ್ವಿಯಾಗಿ ನೆರವೇರಿತು.

























