ನೆಲ್ಯಾಡಿ: ಪೇಟೆಯ ಮಧ್ಯಭಾಗದಲ್ಲಿ ಸರಣಿ ಅಪಘಾತ ಸಂಭವಿಸಿ ಕೆಲ ಕಾಲ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ನಡೆದಿದೆ.
ನೆಲ್ಯಾಡಿಯ ಗಣೇಶ್ ಸ್ಟೋರ್ ಬಳಿ ನಿಲ್ಲಿಸಿದ್ದ ಲೈನ್ ಸೇಲ್ಸ್ ಈಚರ್ ಗಾಡಿ, ಪಶು ಆಹಾರ ಸಾಗಿಸುತ್ತಿದ್ದ ಗೂಡ್ಸ್ ಟೆಂಪೋ ಗೆ ಲಾರಿಯೊಂದು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ತೀವ್ರತೆಯಿಂದ ಈಚರ್ ಲಾರಿ ನೇರವಾಗಿ ಗಣೇಶ್ ಸ್ಟೋರ್ ಅಂಗಡಿಗೆ ನುಗ್ಗಿದ ಘಟನೆ ನಡೆದಿದೆ.
ಘಟನೆಯಲ್ಲಿ ಮೂರು ವಾಹನಗಳು ಗಂಭೀರವಾಗಿ ಜಖಂಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಅಪಘಾತದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಸಮಯ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತು.
ಮಾಹಿತಿ ಪಡೆದ ನೆಲ್ಯಾಡಿ ಹೊರ ಠಾಣೆಯ ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಹಾನಿಗೊಂಡ ವಾಹನಗಳನ್ನು ತೆರವುಗೊಳಿಸಿದರು.

























