ಪುತ್ತೂರು ತಾಲೂಕು, ಸರ್ವೆ ಗ್ರಾಮದ ಭಕ್ತಕೋಡಿ ಜಂಕ್ಷನ್ ಬಳಿ ಸಾರ್ವಜನಿಕ ರಸ್ತೆಗೆ ಹೊಂದಿಕೊಂಡು ನಿರ್ಮಿಸಲಾಗಿದ್ದ ಅನಧಿಕೃತ ಕಟ್ಟೆಯನ್ನು ಅಧಿಕಾರಿಗಳು ತೆರವುಗೊಳಿಸಿದ್ದಾರೆ. ಈ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಪಿರ್ಯಾದಿದಾರರು ಪುತ್ತೂರು ಮುಂಡೂರು ಗ್ರಾಮ ಪಂಚಾಯತ್ತಿನ ಸರ್ಕಾರಿ ನೌಕರರಾಗಿದ್ದು, 2017ರ ಸೆಪ್ಟೆಂಬರ್ ತಿಂಗಳಲ್ಲಿ ಸದ್ರಿ ಸ್ಥಳದಲ್ಲಿ ಸಾರ್ವಜನಿಕ ರಸ್ತೆಯ ಬದಿಯಲ್ಲಿ ತ್ರಿಕೋನಾಕಾರದ ಅನಧಿಕೃತ ಕಟ್ಟೆ ನಿರ್ಮಾಣವಾಗಿತ್ತು. ಆ ಸಂದರ್ಭ ಸಾರ್ವಜನಿಕರ ಮಧ್ಯೆ ಮಾತಿನ ಚಕಮಕಿ ಉಂಟಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಅಂದಿನ ಪಂಚಾಯತ್ ಹಾಗೂ ಪೊಲೀಸ್ ಅಧಿಕಾರಿಗಳು ಕಟ್ಟೆಯನ್ನು ತೆರವುಗೊಳಿಸುವಂತೆ ಸೂಚನೆ ನೀಡಿದ್ದರು.
ಆದರೆ ಕಟ್ಟೆಯನ್ನು ತೆರವುಗೊಳಿಸದೆ, ಇತ್ತೀಚೆಗೆ ಅನಧಿಕೃತ ಕಟ್ಟೆಯಲ್ಲೇ ಮರದ ಕಂಬವನ್ನು ನೆಟ್ಟು ಅದಕ್ಕೆ ಧಾರ್ಮಿಕ ಧ್ವಜವನ್ನು ಅಳವಡಿಸಿರುವ ಬಗ್ಗೆ ದಿನಾಂಕ 16-12-2025 ರಂದು ಸಾರ್ವಜನಿಕರಿಂದ ಮಾಹಿತಿ ಲಭಿಸಿತ್ತು. ಮಾಹಿತಿ ಪಡೆದ ಪಿರ್ಯಾದಿದಾರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, ಈ ಹಿಂದೆ ವಿವಾದಕ್ಕೀಡಾಗಿದ್ದ ಅದೇ ಕಟ್ಟೆಯಲ್ಲಿ ಕಂಬ ಮತ್ತು ಧ್ವಜ ಅಳವಡಿಸಿರುವುದು ದೃಢಪಟ್ಟಿದೆ.
ಈ ಅನಧಿಕೃತ ಕೃತ್ಯದಿಂದ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇರುವುದನ್ನು ಗಮನಿಸಿದ ಅಧಿಕಾರಿಗಳು, ದಿನಾಂಕ 17-12-2025 ರಂದು ಅನಧಿಕೃತ ಕಟ್ಟೆಯನ್ನು ತೆರವುಗೊಳಿಸಿದ್ದಾರೆ.
ಈ ಸಂಬಂಧ ಯಾವುದೇ ಅಧಿಕೃತ ಪರವಾನಗಿ ಪಡೆಯದೇ ಸಾರ್ವಜನಿಕ ಸ್ಥಳದಲ್ಲಿ ಕಟ್ಟೆ ನಿರ್ಮಿಸಿ ಶಾಂತಿ ಕದಡುವ ಸಾಧ್ಯತೆ ಉಂಟುಮಾಡಿದ ಆರೋಪದಡಿ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. ನಂ. 147-2025 ರಂತೆ ಬಿಎನ್‌ಎಸ್ 2023ರ ಕಲಂ 270 ಹಾಗೂ ಕರ್ನಾಟಕ ಓಪನ್ ಪ್ಲೇಸ್ ಡಿಸ್ಫಿಗರ್‌ಮೆಂಟ್ ಆಕ್ಟ್ 1951 ಮತ್ತು 1981ರ ಕಲಂ 3 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಧಿಕಾರಿಗಳ ಪ್ರಕಾರ, 2017ರ ಚುನಾವಣಾ ಪೂರ್ವದಲ್ಲಿ ಈ ಕಟ್ಟೆ ನಿರ್ಮಾಣವಾಗಿದ್ದು, ನಂತರ ಯಾವುದೇ ಚಟುವಟಿಕೆಗಳು ನಡೆದಿರಲಿಲ್ಲ. ಇತ್ತೀಚೆಗೆ ರಾಜಕೀಯ ಉದ್ದೇಶಗಳಿಂದ ಪ್ರೇರಿತ ಚಟುವಟಿಕೆಗಳ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ, ಆ ಅಂಶಗಳನ್ನೂ ಒಳಗೊಂಡಂತೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

























