ಬೆಳಗಾವಿ ಮೂಲದ ಮಹಿಳೆಯೊಬ್ಬರು ತಮ್ಮ ಗಂಡ ಹಾಗೂ ಅಪ್ರಾಪ್ತ ವಯಸ್ಸಿನ ಮಗಳೊಂದಿಗೆ ಕೆಲಸದ ನಿಮಿತ್ತ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದರು. ಈ ನಡುವೆ ಅಬ್ದುಲ್ ಗಫೂರ್ ಎಂಬ ವ್ಯಕ್ತಿ, ಅಪ್ರಾಪ್ತ ಬಾಲಕಿಗೆ ಜೇನು ಕೃಷಿ ಕಲಿಸುವುದಾಗಿ ನಂಬಿಸಿ, ಕಳೆದ ಎರಡು ತಿಂಗಳಿನಿಂದ ತನ್ನ ಮನೆಯಲ್ಲಿ ಇರಿಸಿಕೊಂಡಿದ್ದನು ಎನ್ನಲಾಗಿದೆ.
ಡಿಸೆಂಬರ್ 19ರಂದು ಬಾಲಕಿಯ ಹೆತ್ತವರು ಊರಿಂದ ಹಿಂತಿರುಗಿ ಬಂದ ಸಂದರ್ಭದಲ್ಲಿ, ಬಾಲಕಿ ಅಳುತ್ತಾ ಬಂದು, ಡಿಸೆಂಬರ್ 2ರಿಂದ ಆರೋಪಿಯು ತನ್ನ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ತಿಳಿಸಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಪೋಷಕರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 118/2025 ಅಡಿ BNS-2023ರ ಕಲಂ 115(2), 351(2), 65(1) ಹಾಗೂ ಪೋಕ್ಸೋ ಕಾಯ್ದೆ 2012ರ ಕಲಂ 4 ಮತ್ತು 6ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

























