ಪುತ್ತೂರು: ಹೆಜಮಾಡಿಯಲ್ಲಿ ಬ್ರಹ್ಮಬೈದರ್ಕಳ ಗರಡಿ ಜಾತ್ರೆಯಲ್ಲಿ ವೃದ್ಧೆಯೊಬ್ಬರ ಚಿನ್ನ ಕಳವು ಮಾಡಿದ್ದ ಕಳ್ಳಿಯರು ಕೆಮ್ಮಿಂಜೆ ದೇವಸ್ಥಾನದ ಕಾರ್ಯಕ್ರಮದಲ್ಲಿಯೂ ತಮ್ಮ ಕೈಚಳಕ ತೋರಿಸಲು ಹೋಗಿ ಸಾರ್ವಜನಿಕರ ಕೈಗೆ ಸಿಕ್ಕಿ ಪೊಲೀಸರ ವಶವಾದ ಘಟನೆ ವರದಿಯಾಗಿದೆ.
ತಮಿಳುನಾಡು ಕೃಷ್ಣಗಿರಿ ನಿವಾಸಿಗಳಾದ ಮಾರಿ, ಕಾಶ್ಯಮ್ಮ, ಶೀತಲ್ ಎಂಬವರು ಪೊಲೀಸ್ ವಶದಲ್ಲಿರುವ ಆರೋಪಿಗಳು.
ಈ ಮೂವರು ಮಹಿಳಾ ಮಣಿಗಳು ಹೆಜಮಾಡಿಯಲ್ಲಿ ಬ್ರಹ್ಮಬೈದರ್ಕಳ ಗರಡಿಯ ಜಾತ್ರೆಯ ದಿನ ವೃದ್ಧೆಯೊಬ್ಬರ ಚಿನ್ನ ಕಳ್ಳತನ ಮಾಡಿದ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.ಬಳಿಕದ ಬೆಳವಣಿಗೆಯಲ್ಲಿ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.ಹೆಜಮಾಡಿಯಲ್ಲಿ ಕಳವು ಮಾಡಿ ತಪ್ಪಿಸಿಕೊಂಡು ಬಂದಿದ್ದ ಆರೋಪಿತ ಮೂವರು ಮಹಿಳೆಯರು ಕೆಮ್ಮಿಂಜೆ ದೇವಸ್ಥಾನದಲ್ಲೂ ತಮ್ಮ ಕೈಚಳಕ ತೋರಿಸಿ ಮಹಿಳೆಯೋರ್ವರ ಕತ್ತಿನಿಂದ ಚಿನ್ನದ ಸರ ಕಳವಿಗೆ ಯತ್ನಿಸಿ, ಬಳಿಕ ಸಾರ್ವಜನಿಕರ ಮೂಲಕ ಇದೀಗ ಪೊಲೀಸರ ವಶವಾಗಿದ್ದಾರೆ.
ಹೆಜಮಾಡಿಯಲ್ಲಿ ನಡೆದಿದ್ದ ಕಳವಿನ ದೃಶ್ಯ ವೈರಲ್ ಆಗಿರುವುದನ್ನು ನೋಡಿದ್ದ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರೊಬ್ಬರು, ಈ ಮೂವರು ಮಹಿಳೆಯರನ್ನು ಗುರುತಿಸಿ ಬಳಿಕ ಸಾರ್ವಜನಿಕರ ಮೂಲಕ ಪೊಲೀಸರಿಗೆ ಒಪ್ಪಿಸಲಾಗಿತ್ತು.ಈ ನಡುವೆ, ತನ್ನ ಚಿನ್ನ ಕಳವಾಗಿರುವ ಕುರಿತು ಮಹಿಳೆಯೋರ್ವರು ಪೊಲೀಸರಿಗೆ ದೂರನ್ನೂ ನೀಡಿದ್ದಾರೆ.ಘಟನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.























