ಮಂಗಳೂರು : ನಾಲ್ಕು ವರ್ಷಗಳ ಹಿಂದೆ ಕಂಬಳದ ಓಟಗಾರ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ನೂರು ಮೀಟರ್ ಓಟವನ್ನು ಕೇವಲ 8.76 ಸೆಕೆಂಡಿನಲ್ಲಿ ಪೂರೈಸುವ ಮೂಲಕ ಜಗತ್ತಿನ ಅತಿ ವೇಗದ ಓಟಗಾರ ಹುಸೇನ್ ಬೋಲ್ಟ್ ಸಾಧನೆಯನ್ನು ಮೀರಿಸಿದ್ದು ದೇಶದ ಗಮನ ಸೆಳೆದಿತ್ತು. ಆದರೆ, ಕಂಬಳ ಓಟದಲ್ಲಿ ಶ್ರೀನಿವಾಸ ಗೌಡರ ದಾಖಲೆಯನ್ನು ಮೀರಿಸಿದ ಹೊಸ ದಾಖಲೆ ಮಂಗಳೂರು ಕಂಬಳದಲ್ಲಿ ದಾಖಲಾಗಿದೆ.
ಸಂಸದ ಕ್ಯಾ.ಬ್ರಿಜೇಶ್ ಚೌಟ ನೇತೃತ್ವದಲ್ಲಿ ನಗರದ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ನಡೆದ ಕಂಬಳದಲ್ಲಿ ಶ್ರೀಕಾ ಸಂದೀಪ್ ಶೆಟ್ಟಿ ಮಾಲಿಕತ್ವದ ಗಾಂಧಿ ಮೈದಾನ ಸಂತು ಮತ್ತು ಸುರತ್ಕಲ್ ಪಾಂಚ ಕೋಣಗಳನ್ನು ಕುಂದ ಬಾರಂದಡಿ ಮಾಸ್ತಿಕಟ್ಟೆ ಸ್ವರೂಪ್ ಕುಮಾರ್ ಓಡಿಸಿದ್ದರು. ಆ ಕೋಣಗಳು 125 ಮೀ ಉದ್ದವನ್ನು 10.87 ಸೆಕೆಂಡ್ಗಳಲ್ಲಿ ಕ್ರಮಿಸಿದವು. ಅವು 100 ಮೀ ದೂರವನ್ನು 8.69 ಸೆಕೆಂಡ್ಗಳಲ್ಲಿ ಕ್ರಮಿಸಿದಂತಾಗಿದೆ.
ಮಂಗಳೂರು ಕಂಬಳದ ಸೆಮಿಫೈನಲ್ನಲ್ಲಿ ಗಾಂಧಿ ಮೈದಾನ ಸಂತು ಮತ್ತು ಸುರತ್ಕಲ್ ಪಾಂಚ ಕೋಣಗಳ ಜೋಡಿ 125 ಮೀಟರ್ ದೂರವನ್ನು 11.06 ಸೆಕೆಂಡ್ ನಲ್ಲಿ ಕ್ರಮಿಸಿದ್ದು ಈ ಋತುವಿನ ಅತಿ ವೇಗದ ಓಟ ಎಂದು ದಾಖಲಾಗಿತ್ತು. ಫೈನಲ್ನಲ್ಲಿ ಅದೇ ಕೋಣಗಳು ಹಿಂದಿನ ಎಲ್ಲಾ ದಾಖಲೆಗಳನ್ನು ಅಳಿಸಿಹಾಕಿದವು.
ಕಂಬಳದ ಅತಿ ವೇಗದ ಓಟದ ದಾಖಲೆ ಈ ಹಿಂದೆ ಮಿಜಾರು ಅಶ್ವತ್ಥಪುರದ ಶ್ರೀನಿವಾಸ ಗೌಡ ಹೆಸರಿನಲ್ಲಿತ್ತು. 2021ರಲ್ಲಿ ಕಕ್ಯಪದವು ಕಂಬಳದಲ್ಲಿ ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಅವರ ಮಾಳ ಪುಟ್ಟ ಮತ್ತು ಮಿಜಾರ್ ಅಪ್ಪು ಕೋಣಗಳನ್ನು ಓಡಿಸಿದ್ದರು. ಆ ಕೋಣಗಳು 125 ಮೀಟರ್ ಅನ್ನು 10.95 ಸೆಕೆಂಡ್ ಗಳಲ್ಲಿ ಕ್ರಮಿಸಿದ್ದವು. ಅವು, 100 ಮೀ ದೂರವನ್ನು 8.76 ಸೆಕೆಂಡ್ಗಳಲ್ಲಿ ಕ್ರಮಿಸಿದ್ದವು.

























