ಪುತ್ತೂರು: ಪುತ್ತೂರು ಕಸಬಾ ನಿವಾಸಿ, ನಿವೃತ್ತ ಪ್ರಾಂಶುಪಾಲರಾದ ಎ.ವಿ. ನಾರಾಯಣ (84) ಎಂಬವರ ಮನೆಯಲ್ಲಿ ಮಧ್ಯರಾತ್ರಿ ನಡೆದ ದರೋಡೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ನಗರ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ.
ಡಿಸೆಂಬರ್ 17, 2025ರಂದು ಮಧ್ಯರಾತ್ರಿ, ಹೆಲ್ಮೆಟ್ ಧರಿಸಿ ಮುಖಚಹರೆ ಮರೆಮಾಚಿಕೊಂಡಿದ್ದ ಇಬ್ಬರು ಅಪರಿಚಿತರು ಪಿರ್ಯಾದಿದಾರರ ಮನೆಯ ಹಿಂಬಾಗಿಲಿನಿಂದ ಒಳನುಗ್ಗಿ, ಬೆಲೆಬಾಳುವ ಸೊತ್ತುಗಳನ್ನು ಕಳ್ಳತನ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಪಿರ್ಯಾದಿದಾರರು ಹಾಗೂ ಅವರ ಪತ್ನಿಯನ್ನು ಬೆದರಿಸಿದ್ದು, ನಡೆದ ತಳ್ಳಾಟದಲ್ಲಿ ಪಿರ್ಯಾದಿದಾರರ ಪತ್ನಿಗೆ ಗಾಯವಾಗಿದೆ. ನಾರಾಯಣ ಅವರು ಜೋರಾಗಿ ಕಿರುಚಿದ ಪರಿಣಾಮ ಹೆದರಿದ ಆರೋಪಿಗಳು ಯಾವುದೇ ಸೊತ್ತುಗಳನ್ನು ಕಳ್ಳತನ ಮಾಡದೇ ಪರಾರಿಯಾಗಿದ್ದರು.
ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ.127/2025 ಕಲಂ 307 ಹಾಗೂ 3(5) ಬಿ.ಎನ್.ಎಸ್ 2023ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪುತ್ತೂರು ನಗರ ಪೊಲೀಸರು ಪುತ್ತೂರು ಮುಡೂರು ನಿವಾಸಿಗಳಾದ (ಪ್ರಸ್ತುತ ಪಂಜದಲ್ಲಿ ಬಾಡಿಗೆ ಮನೆ ವಾಸ) ಕಾರ್ತಿಕ್ ರಾವ್ (31) ಹಾಗೂ ಅವರ ಪತ್ನಿ ಕೆ.ಎಸ್. ಸ್ವಾತಿ ರಾವ್ (25) ಎಂಬವರನ್ನು ಬಂಧಿಸಿದ್ದಾರೆ. ಆರೋಪಿಗಳು ಕೃತ್ಯಕ್ಕೆ ಬಳಸಿದ ಮೋಟಾರು ಸೈಕಲ್ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಕಾರ್ತಿಕ್ ರಾವ್ ಸಹಾಯಕ ಅರ್ಚಕರಾಗಿ ಕೆಲಸ ಮಾಡುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ತನಿಖೆ ಮುಂದುವರಿದಿದೆ.

























