ಬಂಟ್ವಾಳ ತಾಲೂಕು ಪೆರ್ನೆ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಎಟಿಎಂ ನಗದು ವಹಿವಾಟಿನಲ್ಲಿ ಭಾರಿ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಶಾಖೆಯ ಜಂಟಿ ವ್ಯವಸ್ಥಾಪಕ ಸುಬ್ರಹ್ಮಣ್ಯಂ (30), ನಿವಾಸಿ ಪುಲುಗುಜ್ಜು, ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿತ ಸುಬ್ರಹ್ಮಣ್ಯಂ ಅವರು ದಿನಾಂಕ 04-09-2023 ರಿಂದ 19-12-2025 ರವರೆಗೆ ಬ್ಯಾಂಕ್ ಆಫ್ ಬರೋಡಾ ಪೆರ್ನೆ ಶಾಖೆಯಲ್ಲಿ ಜಂಟಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಎಟಿಎಂ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಹೊಂದಿದ್ದರು. ತನಿಖೆಯ ಪ್ರಕಾರ, ಅವರು 06-02-2024 ರಿಂದ 16-12-2025 ರ ಅವಧಿಯಲ್ಲಿ ಎಟಿಎಂಗೆ ನಿಗದಿತ ಪ್ರಮಾಣದ ನಗದು ಜಮಾ ಮಾಡದೇ ಕಡಿಮೆ ಹಣ ಜಮಾ ಮಾಡಿ, ರೂ.70,86,000 ಮೊತ್ತವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಇದಲ್ಲದೆ, 19-12-2025 ರಂದು ಬ್ಯಾಂಕಿನ ಸೇಫ್ ಲಾಕರ್ ಪರಿಶೀಲನೆಯ ವೇಳೆ ರೂ.55,000 ಮೌಲ್ಯದ 4.400 ಗ್ರಾಂ ಚಿನ್ನವೂ ವಂಚನೆಯಾಗಿರುವುದು ಪತ್ತೆಯಾಗಿದೆ. ಹಣದ ದುರುಪಯೋಗ ಬೆಳಕಿಗೆ ಬರುತ್ತಿದ್ದಂತೆ, ಆರೋಪಿತನು 17-12-2025 ರಂದು ಯಾರಿಗೂ ಮಾಹಿತಿ ನೀಡದೇ ಕೆಲಸದಿಂದ ತೆರಳಿರುವುದಾಗಿ ತಿಳಿದುಬಂದಿದೆ.
ಈ ಕುರಿತು ಬ್ಯಾಂಕ್ ಆಫ್ ಬರೋಡಾದ ಪ್ರಾದೇಶಿಕ ವ್ಯವಸ್ಥಾಪಕರಾದ ಶ್ರೀ ಸಿ.ವಿ.ಎಸ್. ಚಂದ್ರಶೇಖರ್ (50), ಜೆಪ್ಪು, ಮಂಗಳೂರು ಅವರು 23-12-2025 ರಂದು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 121/2025 ರಂತೆ ಕಲಂ 314, 316(5), 318(2) BNS–2023 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಒಟ್ಟು ವಂಚನೆಯ ಮೊತ್ತ ರೂ.71,41,000 ಆಗಿದ್ದು, ಆರೋಪಿತನ ಪತ್ತೆಗೆ ಮತ್ತು ಹಣ–ಆಭರಣಗಳ ವಸೂಲಿಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

























