ಜ.11 ರಂದು ಸಂಜೆ 6 ರಿಂದ ಶಿವದೂತೆ ಗುಳಿಗೆ ನಾಟಕ ಪ್ರದರ್ಶನ
ಸುಳ್ಯ, ಜ.2 : ಪೆರುವಾಜೆ ಗ್ರಾಮದ ಮುಕ್ಕೂರು ನೇಸರ ಯುವಕ ಮಂಡಲದ 10ನೇ ವರ್ಷದ ಸಂಭ್ರಮಾಚರಣೆ ದಶ ಪ್ರಣತಿ ಹಾಗೂ ಶಾಶ್ವತ ಯೋಜನೆಗಳ ಲೋಕಾರ್ಪಣೆ ಕಾರ್ಯಕ್ರಮ ಜ.10 ಮತ್ತು11ರಂದು ಮುಕ್ಕೂರು ಶಾಲಾ ವಠಾರದಲ್ಲಿ ನಡೆಯಲಿದೆ ಎಂದು ನೇಸರ ದಶಪ್ರಣತಿ ಸಮಿತಿ ಅಧ್ಯಕ್ಷ ಡಾ.ನರಸಿಂಹ ಶರ್ಮ ಕಾನಾವು ಹೇಳಿದರು.
ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ನೇಸರನ ಹೆಸರಿನಲ್ಲಿ ಸಮಾಜಮುಖಿ ಚಿಂತನೆಯ ಬೆಳಕು ಹರಿಸುವ ಪ್ರಯತ್ನದಲ್ಲಿ ನಿರತರಾಗಿರುವ ಮುಕ್ಕೂರು ನೇಸರ ಯುವಕ ಮಂಡಲಕ್ಕೆ ಈಗ ಹತ್ತರ ಹರೆಯ. 2016 ಜ.16ರಂದು ಪ್ರಗತಿಪರ ಕೃಷಿಕ, ಊರ ಪ್ರಮುಖರು ಆಗಿದ್ದ ದಿ.ಕಾನಾವು ತಿರುಮಲೇಶ್ವರ ಭಟ್ ಅವರ ಮೂಲಕ ಉದ್ಘಾಟನೆಗೊಂಡ ಯುವಕ ಮಂಡಲ ಕಳೆದ 9 ವರ್ಷಗಳಲ್ಲಿ ಸುಮಾರು 60 ಕ್ಕೂ ಅಧಿಕ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡು ಬಂದಿದೆ. ಆಧಾರ್ ನೋಂದಣಿ, ಆಯುಷ್ಮಾನ್ ಕಾರ್ಡ್ ನೋಂದಣಿ, ನರೇಗಾ, ಕೃಷಿ ಮಾಹಿತಿ, ಗುರುವಂದನೆ, ಚಲನಚಿತ್ರ ಪ್ರದರ್ಶನ, ಸ್ವಚ್ಚತಾ ಕಾರ್ಯಕ್ರಮ, ಕ್ರೀಡಾಕೂಟ, ಉದ್ಯೋಗ ಖಾತರಿ ಮಾಹಿತಿ ಶಿಬಿರ, ಕೃಷಿ ಮಾಹಿತಿ ಕಾರ್ಯಾಗಾರ, ಅಶಕ್ತರಿಗೆ ನೆರವು ಸಹಿತ ಹತ್ತಾರು ಜನಪರ ಕಾರ್ಯಕ್ರಮಗಳನ್ನು ಈಗಾಗಲೇ ಹಮ್ಮಿಕೊಂಡಿದೆ. ಪಕ್ಷ, ಜಾತಿ, ಧರ್ಮ ಮೀರಿ ಸಾಮರಸ್ಯದ ಸಮಾಜ ನಿರ್ಮಾಣಕೋಸ್ಕರ ಯುವಕ ಮಂಡಲ ಸದಾ ಶ್ರಮಿಸುತ್ತಿದ್ದು ಜನರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದರು.
ಈಗಾಗಲೇ ದಶಪ್ರಣತಿ ಪ್ರಯುಕ್ತ ಕೊಡಗು, ಉಡುಪಿ, ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ವಾಲಿಬಾಲ್, ಹಗ್ಗಜಗ್ಗಾಟ ಸ್ಪರ್ಧೆ ನಡೆದಿದ್ದು ಸುಮಾರು 65 ತಂಡಗಳು ಭಾಗವಹಿಸಿತ್ತು. ಆರೋಗ್ಯಕ್ಕೆ ಸಂಬಂಧಿಸಿದಂತೆ ಪೆರುವಾಜೆ ಗ್ರಾ.ಪಂ.ಸಭಾಂಗಣದಲ್ಲಿ ಉಚಿತ ಕಣ್ಣಿತ ತಪಾಸಣಾ ಶಿಬಿರ ನಡೆದಿದೆ.ಮುಕ್ಕೂರಿನಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದರು.
ಮುಕ್ಕೂರು ಶಾಲಾ ವಠಾರದಲ್ಲಿ ನಡೆಯುವ ದಶಪ್ರಣತಿ ಕಾರ್ಯಕ್ರಮದಲ್ಲಿ ಜ.10 ರಂದು ಬೆಳಗ್ಗೆ 10ಕ್ಕೆ ಪ್ರಗತಿಪರ ಕೃಷಿಕರದ ಅನಿತಾ ಟಿ.ಭಟ್ ಧ್ವಜಾರೋಹಣ ನೆರವೇರಿಸುವರು. ಮುಕ್ಕೂರು ಶಾಲಾ ಎಸ್ ಡಿಎಂಸಿ ಅಧ್ಯಕ್ಷ ಜಯಂತ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ನೇಸರ ದಶಪ್ರಣತಿ ಸಮಿತಿ ಉಪಾಧ್ಯಕ್ಷ ಚಂದ್ರಹಾಸ ರೈ ಮುಕ್ಕೂರು, ಗ್ರಾ.ಪಂ.ಸದಸ್ಯೆ ಚಂದ್ರಾವತಿ ಇಟ್ರಾಡಿ ಉಪಸ್ಥಿತರಿರಲಿದ್ದಾರೆ. ಬೆಳಗ್ಗೆ 10.30ಕ್ಕೆ ದಶಪ್ರಣತಿ ಪ್ರಯುಕ್ತ ಅಶಕ್ತ ಕುಟುಂಬಕ್ಕೆ ಕುಂಡಡ್ಕದಲ್ಲಿ ರೂ.2.5 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನೇಸರ ನಿಲಯದ ಹಸ್ತಾಂತರ ಕಾರ್ಯಕ್ರಮವನ್ನು ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಉಮೇಶ್ ಕೆಎಂಬಿ ನೆರವೇರಿಸಲಿದ್ದಾರೆ. ಬಳಿಕ ನೇಸರ ದಶಪ್ರಣತಿ ಸಮಿತಿ ಉಪಾಧ್ಯಕ್ಷ ಸುಬ್ರಾಯ ಭಟ್ ನೀರ್ಕಜೆ ನೇಸರ ಸ್ವಂತಿಮೂಲೆ ಅನಾವರಣ ಮಾಡಲಿದ್ದಾರೆ. ಮುಕ್ಕೂರು ಅಂಗನವಾಡಿ ಉದ್ಯಾನವನದ ಪ್ರಥಮ ಹಂತದ ಕಾಮಗಾರಿಯನ್ನು ಪ್ರಗತಿಪರ ಕೃಷಿಕ ಗೋಪಾಲ ಸುವರ್ಣ ಬಿ.ಕೆ. ಅವರು ಉದ್ಘಾಟಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಸಾಲು ಮರದ ತಿಮ್ಮಕ್ಕ ಸ್ಮರಣಾರ್ಥ ಹತ್ತು ಗಿಡ ನೆಡುವಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಪ್ರಗತಿಪರ ಕೃಷಿಕರಾದ ಸಂಪತ್ ಕುಮಾರ್ ರೈ ಪಾತಾಜೆ, ಮೋಹನ ಬೈಪಾಡಿತ್ತಾಯ, ಸುಬ್ಬಣ್ಣ ದಾಸ್ ಚೆನ್ನಾವರ,
ಗ್ರಾ.ಪಂ. ಸದಸ್ಯೆ ಗುಲಾಬಿ ಬೊಮ್ಮೆಮಾರು, ಮುಕ್ಕೂರು ಶಾಲಾ ಮುಖ್ಯಗುರು ಲತಾ, ನಿವೃತ್ತ ಬ್ಯಾಂಕ್ ಉದ್ಯೋಗಿ ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಶ್ರೀ ಧ.ಗ್ರಾ.ಯೋಜನಯ ಅರಸಿಕೆರೆ ತಾಲೂಕು ಮೇಲ್ವಿಚಾರಕ ಸೀತಾರಾಮ ಕಾನಾವು, ಉದ್ಯಮಿ ರಫೀಕ್ ಸವಣೂರು, ಧಾರ್ಮಿಕ ಪರಿಚಾರಕ ಕೃಷ್ಣಪ್ಪ ನಾಯ್ಕಅಡ್ಯತಕಂಡ, ಶಿವಪ್ರಕಾಶ್ ಆಚಾರ್ಯ ಅವರು ಗಿಡ ನೆಡಲಿದ್ದಾರೆ ಎಂದರು.
ಸಂಜೆ 5ರಿಂದ ಪುಣ್ಚಪ್ಪಾಡಿ ಶಾಲಾ ವಿದ್ಯಾರ್ಥಿಗಳಿಂದ, ಮುಕ್ಕೂರು ಅಂಗನವಾಡಿ, ಶಾಲಾ ವಿದ್ಯಾರ್ಥಿಗಳಿಂದ, ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಪದಯಾನ ತಂಡದಿಂದ ಭರತನಾಟ್ಯ ನಾಟ್ಯಾಂಜಲಿ, ನೇಸರ ಯುವಕ ಮಂಡಲದ ಸದಸ್ಯರಿಂದ ಕಿರು ನಾಟಕ ದೇವರ ಆಟ ಪ್ರದರ್ಶನಗೊಳ್ಳಲಿದೆ. ರಾತ್ರಿ 7.45 ಕ್ಕೆ ಸಭಾ ಕಾರ್ಯಕ್ರಮವನ್ನು ಪುತ್ತೂರು ಜಿ.ಎಲ್ ಆಚಾರ್ಯ ಜುವೆಲ್ಲರ್ಸ್ ನ ಆಡಳಿತ ನಿರ್ದೇಶಕ ಬಲರಾಮ ಆಚಾರ್ಯ ಉದ್ಘಾಟಿಸಲಿದ್ದಾರೆ. ನೇಸರ ದಶಪ್ರಣತಿ ಸಮಿತಿ-2026 ಅಧ್ಯಕ್ಷ ಡಾ|ನರಸಿಂಹ ಶರ್ಮ ಕಾನಾವು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನೇಸರ ದಶಪ್ರಣತಿ ಸಮಿತಿ ಗೌರವಾಧ್ಯಕ್ಷ , ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ನೇಸರ ದಶಪ್ರಣತಿ ಸಮಿತಿ ಗೌರವಾಧ್ಯಕ್ಷ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ನೇಸರ ದಶಪ್ರಣತಿ ಸಮಿತಿ ಪ್ರಧಾನ ಕಾರ್ಯದರ್ಶಿ ಜಗನ್ನಾಥ ಪೂಜಾರಿ ಮುಕ್ಕೂರು, ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಾಲಯದ ಆಡಳಿತ ಮೊಕ್ತೇಸರ ಉಮೇಶ್ ರಾವ್ ಕೊಂಡೆಪ್ಪಾಡಿ, ನೇಸರ ದಶಪ್ರಣತಿ ಸಮಿತಿ ಸಂಚಾಲಕ ಕುಂಬ್ರ ದಯಾಕರ ಆಳ್ವ, ಉದ್ಯಮಿ ಸಂತೋಷ್ ಕುಮಾರ್ ಅಲೆಕ್ಕಾಡಿ, ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ, ಪ್ರಗತಿಪರ ಕೃಷಿಕ ಯು.ಮಹಮ್ಮದ್ ಕುಂಜೂರು, ಮುಕ್ಕೂರು ನೇಸರ ಯುವಕ ಮಂಡಲದ ಅಧ್ಯಕ್ಷ ರಮೇಶ್ ಕಾನಾವು ಉಪಸ್ಥಿತರಿರಲಿದ್ದಾರೆ ಎಂದರು.
ಜ.11ರಂದು ಸಂಜೆ 6 ರಿಂದ ತುಳು ರಂಗಭೂಮಿಯಲ್ಲಿ ಸಂಚಲನ ಮೂಡಿಸಿದ ವಿಜಯ ಕುಮಾರ್ ಕೊಡಿಯಾಲಬೈಲು ನಿರ್ದೇಶನದ ಕಲಾ ಸಂಗಮ ಕಲಾವಿದರಿಂದ ಶಿವದೂತೆ ಗುಳಿಗೆ ನಾಟಕ ಪ್ರದರ್ಶನಗೊಳ್ಳಲಿದೆ. ರಾತ್ರಿ ದಶಪ್ರಣತಿ ಪ್ರಯುಕ್ತ ಹೊರತರಲಾದ ಅದೃಷ್ಟ ಚೀಟಿಯ ಡ್ರಾ ಅನ್ನು ನೇಸರ ದಶಪ್ರಣತಿ ಉಪಾಧ್ಯಕ್ಷ ನರಸಿಂಹ ತೇಜಸ್ವಿ ಅವರು ನೆರವೇರಿಸಲಿದ್ದಾರೆ. ಎರಡು ದಿನಗಳ ಕಾಲ ಅನ್ನಸಂತರ್ಪಣೆ ವ್ಯವಸ್ಥೆ ಇರಲಿದೆ ಎಂದು ಅವರು ತಿಳಿಸಿದರು.
ಜ.4ರಂದು ಮಾಹಿತಿ ಕಾರ್ಯಾಗಾರ
ದಶಪ್ರಣತಿ ಪ್ರಯುಕ್ತ ಪ್ರಗತಿಪರ ಕೃಷಿಕ ಮೋಹನ ಬೈಪಾಡಿತ್ತಾಯ ಅವರ ಕೃಷಿ ಕ್ಷೇತ್ರದ ಸಹಯೋಗದೊಂದಿಗೆ ಜ.4 ರಂದು ಬೆಳಗ್ಗೆ 9.30 ರಿಂದ ಮಧ್ಯಾಹ್ನ 1 ಗಂಟೆಯ ತನಕ ಕಾಳುಮೆಣಸು, ಕಾಫಿ ಗಿಡ ಕೃಷಿ ಮತ್ತು ನಿರ್ವಹಣೆ ಹಾಗೂ ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣ , ಮಣ್ಣಿನ ಪೋಷಕಾಂಶಗಳ ಬಗ್ಗೆ ಮಾಹಿತಿ ಕಾರ್ಯಾಗಾರ ಮೇಲಿನ ಮುಕ್ಕೂರು ಮೋಹನ ಬೈಪಾಡಿತ್ತಾಯ ಅವರ ಕೃಷಿ ಕ್ಷೇತ್ರದಲ್ಲಿ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಐಸಿಎಆರ್-ಡಿಸಿಆರ್ ಪುತ್ತೂರು ಇದರ ನಿವೃತ್ತ ಪ್ರಧಾನ ವಿಜ್ಞಾನಿ ಡಾ.ಎನ್ ಯದುಕುಮಾರ್, ವಿಟ್ಲ ಸಿಪಿಸಿಆರ್ ಐ ಹಿರಿಯ ವಿಜ್ಞಾನಿ ಡಾ.ನಾಗರಾಜ, ಪ್ರಗತಿಪರ ಕೃಷಿಕರಾದ ಸುರೇಶ್ ಬಲ್ನಾಡು, ಚಂದ್ರಶೇಖರ ತಾಳ್ತಜೆ, ಭ್ಲೂಮ್ ಬಯೋಟೆಕ್ ಸಂಸ್ಥಾಪಕ ಸುಹಾಸ್ ಮೋಹನ್ ಭಾಗವಹಿಸಲಿದ್ದಾರೆ ಎಂದರು.
ಅಶಕ್ತ ಕುಟುಂಬಕ್ಕೆ ಮನೆ ನಿರ್ಮಾಣ
ದಶಪ್ರಣತಿ ಶಾಶ್ವತ ಯೋಜನೆಯಡಿ ಕುಂಡಡ್ಕದಲ್ಲಿ ಟರ್ಪಾಲಿನಲ್ಲಿ ವಾಸ ಮಾಡುತ್ತಿರುವ ಹೊನ್ನಮ್ಮಅವರಿಗೆ ಮನೆ ನಿರ್ಮಿಸಲಾಗುತ್ತಿದೆ. ಇದಕ್ಕೆ ಸುಮಾರು 2.5 ಲಕ್ಷ ವೆಚ್ಚ ತಗಲಲಿದೆ. ಇನ್ನೊಂದೆಡೆ ಮುಕ್ಕೂರು ಅಂಗನವಾಡಿ ಕೇಂದ್ರದಲ್ಲಿ ಉದ್ಯಾನವನ ನಿರ್ಮಾಣಗೊಳ್ಳುತ್ತಿದ್ದು ಸುಮಾರು 50 ಸಾವಿರ ರೂ. ವೆಚ್ಚದಲ್ಲಿ ಮೊದಲ ಹಂತದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮುಖ್ಯವಾಗಿ ಇಡೀ ಮನೆಯ ಕೆಲಸ ಹಾಗೂ ಉದ್ಯಾನವನದ ಪೂರ್ಣ ಕಾಮಗಾರಿಯನ್ನು ನೇಸರ ಯುವಕ ಮಂಡಲದ ಸದಸ್ಯರೇ ಶ್ರಮದಾನದ ಮೂಲಕ ನಿರ್ವಹಿಸಿದ್ದಾರೆ. ಪ್ರತಿ ದಿನ ರಾತ್ರಿ ಶ್ರಮದಾನದ ಕೆಲಸ ನಡೆಯುತ್ತಿದೆ. ಊರ -ಪರವೂರ ದಾನಿಗಳು ವಸ್ತುರೂಪದಲ್ಲಿ ನೆರವು ನೀಡುತ್ತಿದ್ದಾರೆ. ಮುಕ್ಕೂರಿನ ಇತಿಹಾಸದಲ್ಲಿ ಸಂಘಟನೆಯೊಂದು ಮನೆ ನಿರ್ಮಿಸುತ್ತಿರುವುದು, ಸದಸ್ಯರುಗಳೇ ಶ್ರಮದಾನದ ಮೂಲಕ ಮಾಡುತ್ತಿರುವುದು ಪ್ರಥಮವಾಗಿದೆ ಎಂದರು.
ದಶಪ್ರಣತಿ ಕಾರ್ಯಕ್ರಮ ಹಾಗೂ ಶಾಶ್ವತ ಯೋಜನೆಗಳಿಗೆ ಅಂದಾಜು 7.5 ಲಕ್ಷ ರೂ. ತಗಲಲಿದೆ. ಊರ, ಪರವೂರಿನ ದಾನಿಗಳು ನೇಸರ ಯುವಕ ಮಂಡಲದ ಕಾರ್ಯಗಳಿಗೆ ಬೆಂಬಲ ನೀಡುತ್ತಿದ್ದು ಈ ಬಾರಿಯು ಸಹಕಾರ ನೀಡುವ ವಿಶ್ವಾಸ ಇದೆ ಎಂದು ಅವರು ತಿಳಿಸಿದರು.
ಸಮಿತಿ ಸಂಚಾಲಕ ದಯಾಕರ ಆಳ್ವ ಮಾತನಾಡಿ, ನೇಸರ ಯುವಕ ಮಂಡಲದಲ್ಲಿರುವ 20 ಸದಸ್ಯರು ಸರ್ವರನ್ನು ಸೇರಿಸಿಕೊಂಡು ಮಾಡುತ್ತಿರುವ ಕೆಲಸಕ್ಕೆ ನಾವು ಬೆಂಬಲ ನೀಡುತ್ತಿದ್ದೇವೆ ಎಂದರು.
ಉಪಾಧ್ಯಕ್ಷ ಸುಬ್ರಾಯ ಭಟ್ ನೀರ್ಕಜೆ ಮಾತನಾಡಿ, ನೇಸರ ಯುವಕ ಮಂಡಲದ ಸಮಾಜಮುಖಿ ಕೆಲಸಗಳನ್ನು ನೋಡಿ ನಾವು ಕೂಡ ಅವರೊಂದಿಗೆ ಕೈಜೋಡಿದ್ದೇವೆ ಎಂದರು.
ಪ್ರಧಾನ ಕಾರ್ಯದರ್ಶಿ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ನೇಸರ ಯುವಕ ಮಂಡಲದ ಸದಸ್ಯರು ಶಾಶ್ವತ ಯೋಜನೆಯ ಕಾಮಗಾರಿಗಳಲ್ಲಿ ತಾವೇ ಕೆಲಸ ಮಾಡುತ್ತಿದ್ದಾರೆ. ಇದೊಂದು ವಿಶೇಷ ಕಾರ್ಯಕ್ರಮವಾಗಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಸದಸ್ಯ ಜೈನುದ್ದೀನ್ ತೋಟದ ಮೂಲೆ, ನೇಸರ ಯುವಕ ಮಂಡಲದ ಅಧ್ಯಕ್ಷ ರಮೇಶ್ ಕಾನಾವು, ಕಾರ್ಯದರ್ಶಿ ರಾಮಚಂದ್ರ ಚೆನ್ನಾವರ ಉಪಸ್ಥಿತರಿದ್ದರು.


























