ಮಂಗಳೂರು: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಮುದಾಯಗಳ ನಡುವೆ ವೈಷಮ್ಯ ಉಂಟುಮಾಡುವ ಉದ್ದೇಶದಿಂದ ಪ್ರಚೋದನಕಾರಿ ಪೋಸ್ಟ್ ಹಾಗೂ ಕೊಲೆ ಬೆದರಿಕೆ ಕಾಮೆಂಟ್ ಮಾಡಿದ ಆರೋಪದ ಮೇಲೆ ಬಜಪೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದಿನಾಂಕ 27-12-2025ರಂದು ಬಜಪೆ ಠಾಣಾ ವ್ಯಾಪ್ತಿಯ ನಾರ್ಲಪದವು ಪ್ರದೇಶದಲ್ಲಿ ಅಬ್ದುಲ್ ಸತ್ತಾರ್ ಎಂಬವರು ತಮ್ಮ ಮಗಳನ್ನು ಸ್ಕೂಟರ್‌ನಲ್ಲಿ ಕೂರಿಸಿಕೊಂಡು ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ವೇಳೆ, ಸುಮೀತ್ ಮತ್ತು ಎಂ. ರಜತ್ ನಾಯಕ್ ಎಂಬವರು ಅವರನ್ನು ತಡೆದು ಹಲ್ಲೆ ನಡೆಸಿದ ಕುರಿತು ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು ತನಿಖೆ ಮುಂದುವರಿದಿದೆ.
ಈ ಘಟನೆಯ ಸಂಬಂಧವಾಗಿ INSTAGRAMನಲ್ಲಿ muslim__leader ಎಂಬ ಖಾತೆಯಲ್ಲಿ ಇಬ್ಬರು ಯುವಕರ ಫೋಟೋಗಳನ್ನು ಪ್ರಕಟಿಸಿ, ನಿರ್ದಿಷ್ಟ ಸಂಘಟನೆ ಹಾಗೂ ಸಮುದಾಯವನ್ನು ಉದ್ದೇಶಿಸಿ ಅವಹೇಳನಕಾರಿ, ಪ್ರಚೋದನಕಾರಿ ಪದಗಳನ್ನು ಬಳಸಿ ಪೋಸ್ಟ್ ಮಾಡಲಾಗಿದೆ. ಅಲ್ಲದೆ, instg4ama ಎಂಬ ಮತ್ತೊಂದು ಇನ್‌ಸ್ಟಾಗ್ರಾಮ್ ಐಡಿಯಿಂದ ಆ ಪೋಸ್ಟ್‌ಗೆ “ಇವರಿಗೆ ಸುಹಾಸ್ ಶೆಟ್ಟಿ ಟ್ರೀಟ್‌ಮೆಂಟ್ ಕೊಡಬೇಕು ಸದ್ಯದಲ್ಲಿ” ಎಂಬ ಕೊಲೆ ಬೆದರಿಕೆ ಅರ್ಥವಿರುವ ಕಾಮೆಂಟ್ ಮಾಡಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಉದ್ದೇಶಪೂರ್ವಕವಾಗಿ ವರ್ಗ ಹಾಗೂ ಸಮುದಾಯಗಳ ನಡುವೆ ದ್ವೇಷ ಮತ್ತು ಅಶಾಂತಿ ಉಂಟುಮಾಡುವ ಪ್ರಯತ್ನ ಮಾಡಿರುವುದು, ಹಾಗೂ ನಿರ್ದಿಷ್ಟ ವ್ಯಕ್ತಿಯನ್ನು ಕೊಲ್ಲುವ ಬೆದರಿಕೆ ನೀಡಿರುವುದು ಗಂಭೀರ ಅಪರಾಧವಾಗಿರುವ ಹಿನ್ನೆಲೆಯಲ್ಲಿ, ಬಜಪೆ ಪೊಲೀಸರು ಮೊ.ನಂ 07/2026ರ ಅಡಿಯಲ್ಲಿ BNS-2023 ಕಲಂ 351(2), 351(3), 352, 353(2), 192 ರಂತೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಆರೋಪಿತರನ್ನು ಶೀಘ್ರದಲ್ಲೇ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

























